ಬೆಂಗಳೂರು:- ಡ್ರಗ್ಸ್ ಗೆ ದಾಸನಾಗಿದ್ದ 28 ವರ್ಷದ ಯುವಕ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಕೊತ್ತನೂರಿನ ಕೆ.ನಾರಾಯಣಪುರದಲ್ಲಿ ಜರುಗಿದೆ.
28 ವರ್ಷದ ಸುನೀಲ್ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಮಾ.7ರಂದು ತಡರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುನೀಲ್‌ಗೆ ಡ್ರಗ್ಸ್ ಜೊತೆಗೆ ಹುಡುಗಿಯರ ಶೋಕಿ ಕೂಡ ಇತ್ತು. ಹೀಗಾಗಿ ತನ್ನ ಚಟಕ್ಕಾಗಿ ಮನೆಯಲ್ಲಿಯೇ ಚಿನ್ನ, ಹಣ ಕಳ್ಳತನ ಮಾಡುತ್ತಿದ್ದ. ಇದನ್ನು ಮನೆಯವರು ಪ್ರಶ್ನಿಸಿದರೇ ಸಾಯೋದಾಗಿ ಹೇಳುತ್ತಿದ್ದ.
ನಂತರ ಮನೆಬಿಟ್ಟು ಕೊತ್ತನೂರು ಪಿಜಿ ಸೇರಿದ್ದ ಸುನೀಲ್, ಗ್ಯಾರೇಜ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮಾ.7ರಂದು ರಾತ್ರಿ ಮಾಲೀಕನಿಗೆ ಸಾಯೋದಾಗಿ ಮೆಸೆಜ್ ಮಾಡಿದ್ದ. ಬಳಿಕ ಪಿಜಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



