ಬೆಂಗಳೂರು:- ನಡು ರಸ್ತೆಯಲ್ಲಿಯೇ ಕಾರೊಂದು ಹೊತ್ತಿ ಉರಿದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಯಶವಂತಪುರ ಕಡೆಯಿಂದ ಮಲ್ಲೇಶ್ವರಂ ನ ಸರ್ಕಲ್ ಮಾರಮ್ಮ ದೇವಸ್ಥಾನದ ಕಡೆಗೆ ಹೋಗುತ್ತಿದ್ದ ಕಾರು, ಇದ್ದಕ್ಕಿದ್ದಂತೆ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಘಟನೆಗೂ ಮುನ್ನ ಕಾರಿನ ಒಳಬಾಗದಲ್ಲಿ ಹೊಗೆ ಕಾಣಿಸಿ ಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಾಲಕ, ತಕ್ಷಣ ಕಾರಿನಿಂದ ಕೆಳಗಡೆ ಇಳಿದಿದ್ದಾನೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



