ಬೆಂಗಳೂರು: ನಗರದ ಮಹದೇವಪುರ ಪ್ರದೇಶದ ಗರುಡಚಾರ್ಯ ಪಾಳ್ಯದಲ್ಲಿ ನಿನ್ನೆ ರಾತ್ರಿ ನಡುರಸ್ತೆಯಲ್ಲೇ ಕಾರೊಂದು ಅಚಾನಕ್ ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವೇಳೆ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಕಾರಿನ ಮುಂಭಾಗದಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣವೇ ಕಾರನ್ನು ನಿಲ್ಲಿಸಿ ಪರಿಶೀಲನೆ ನಡೆಸಲು ಮುಂದಾದಾಗ, ಕ್ಷಣಾರ್ಧದಲ್ಲಿ ಬೆಂಕಿ ಸಂಪೂರ್ಣ ಕಾರಿಗೆ ವ್ಯಾಪಿಸಿದೆ ಎನ್ನಲಾಗಿದೆ.
ಘಟನೆಯ ಸಮಯದಲ್ಲಿ ಕಾರಿನಲ್ಲಿದ್ದವರು ಸಮಯಕ್ಕೆ ಸರಿಯಾಗಿ ಹೊರಬಂದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಬೆಂಕಿಗೆ ಆಹುತಿಯಾದ ಕಾರು ಲೋಕೇಶ್ ಎಂಬುವರಿಗೆ ಸೇರಿದ್ದು, KA-03 AL-5589 ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಜೈರ್ ಕಾರು ಎಂದು ತಿಳಿದುಬಂದಿದೆ. ಈ ಕಾರನ್ನು ಸುಮಾರು ಎರಡು ವರ್ಷಗಳ ಹಿಂದೆ ಖರೀದಿಸಲಾಗಿತ್ತು ಎನ್ನಲಾಗಿದೆ.
ಘಟನೆಯ ಸಂಬಂಧ ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



