ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕ ವಾತಾವರಣ ಉಂಟಾಗಿದೆ.
ಪರಿಶೀಲನೆ ವೇಳೆ, ಬಂಡೆ ಒಡೆಯಲು ಬಳಸುವ ಜಿಲೆಟಿನ್, ಕೇಪ್‌ಗಳು ಮತ್ತು 13 ಜೆಲ್ ಪ್ಯಾಕೆಟ್‌ಗಳು, 23 ಎಲೆಕ್ಟ್ರಿಕ್ ಡಿವೈಸುಗಳು ವಶಕ್ಕೆ ಪಡೆದಿರುವುದು ತಿಳಿದುಬಂದಿದೆ. ಒಂದು ಟ್ರ್ಯಾಕ್ಟರ್ ಮತ್ತು ಜೆಸಿಬಿಯೂ ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಸ್ಥಿತಿಯಿಂದ ತಿಳಿದುಬಂದಂತೆ, ಸೈಟ್‌ನಲ್ಲಿ ಕಾರ್ಮಿಕರು ಕಳೆದ ಹದಿನೈದು ದಿನಗಳಿಂದ ಡ್ರಿಲ್ ಮಾಡುತ್ತಿದ್ದವರು. ಇಂದು ಒಂದೇ ಸಾರಿ ಬ್ಲಾಸ್ಟ್ ಮಾಡಲು ಯತ್ನಿಸುತ್ತಿದ್ದು, ಅಕ್ಕಪಕ್ಕದ ಮೂರು–ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಸೈಟಿನಲ್ಲಿ ಹಿಂದೆ ಸಣ್ಣ ಪ್ರಮಾಣದ ಬ್ಲಾಸ್ಟ್ ಆಗಿರುವುದಕ್ಕೂ ಮಾಹಿತಿ ಲಭ್ಯವಿದೆ.
ಜಾಗದ ಮಾಲೀಕರು ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಸ್ಥಳದಲ್ಲಿ ಬಿಬಿಎಂಪಿ ಕೆಲಸ ನಡೆಯುತ್ತಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ. ಈ ಹಿಂದೆ ಎನ್‌ಸಿಐಆರ್ ದಾಖಲಿಸಿ ಕಾರ್ಮಿಕರಿಗೆ ವಾರ್ನಿಂಗ್ ನೀಡಲಾಗಿತ್ತು, “ಇನ್ಮುಂದೆ ಮಾಡೊದಿಲ್ಲ” ಎಂದು ಹೇಳಿದರು. ಆದರೆ, ಇಂದು ಅವರು ಜೆಸಿಬಿ ಮತ್ತು ಇಟಾಚಿ ಉಪಕರಣಗಳನ್ನು ಬಳಸಿಕೊಂಡು ಕೆಲಸ ಮುಂದುವರಿಸಿದ್ದನ್ನು ಪೊಲೀಸರು ಕಂಡಿದ್ದಾರೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತಂಡಗಳು ಪರಿಶೀಲನೆ ನಡೆಸಿವೆ. ಪೊಲೀಸರು ಬರ್ತಿದ್ದಂತೆ ಕಾರ್ಮಿಕರು ಸ್ಥಳವನ್ನು ತೊರೆದು ಓಡಿದ್ದಾರೆ. ಸದ್ಯ, ಹುಳಿಮಾವು ಪೊಲೀಸರು ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು, ಸಂಪೂರ್ಣ ತನಿಖೆ ಕೈಗೊಂಡಿದ್ದಾರೆ.



