ಬೆಂಗಳೂರು:- ರಾಮಮೂರ್ತಿ ನಗರದ ಸುಬ್ರಮಣ್ಯ ಬಡಾವಣೆಯಲ್ಲಿ ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರು ಮೂಲದವರಾದ ಶರ್ಮಿಳಾ (34) ಮೃತ ದುರ್ದೈವಿ. ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್ ವೇರ್ ಕಂಪನಿಯಲ್ಲಿ ಎಂಜಿನಿಯರ್ ಕೆಲಸ ಮಾಡ್ತಿದ್ದರು.
ಶರ್ಮಿಳಾ ವಾಸವಿದ್ದ ಫ್ಲ್ಯಾಟ್‌ನ ರೂಮ್‌ವೊಂದರಲ್ಲಿ ಮೊನ್ನೆ ರಾತ್ರಿ 10.30 ರ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿದೆ. ಇದನ್ನ ನೋಡಿದ ಮನೆ ಮಾಲೀಕ ವಿಜಯೇಂದ್ರ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಶರ್ಮಿಳಾ ಮನೆ ಬಳಿ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಮನೆಯ ಡೋರ್ ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ರೂಮ್ ಹಾಗೂ ಹಾಲ್ ನಲ್ಲಿ ಬೆಂಕಿ ಬಿದ್ದು ಹೊಗೆ ತುಂಬಿಕೊಂಡಿತ್ತು.
ಬೆಂಕಿ ಬಿದ್ದಿದ್ದ ಪರಿಣಾಮ ರೂಮಿನಿಂದ ಹೊರ ಬರಲಾಗದೇ ಉಸಿರುಗಟ್ಟಿ ಟೆಕ್ಕಿ ಶರ್ಮಿಳಾ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



