ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರು ಹೊಸ ವರ್ಷದ ಸಂಭ್ರಮಕ್ಕೆ ಸಂಪೂರ್ಣ ಸಜ್ಜಾಗಿದೆ.
ರಾಜಧಾನಿಯ ಇಂದಿರಾನಗರ, ಕೋರಮಂಗಲ, ಎಂ.ಜಿ ರೋಡ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದ್ದು, ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಸ್ವತಃ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ನಲ್ಲಿ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಡಿಸಿಪಿ ಅಕ್ಷಯ್ ಎಂ. ಹಾಕೆ ಹಾಗೂ ಟ್ರಾಫಿಕ್ ಡಿಸಿಪಿ ಅನೂಪ್ ಶೆಟ್ಟಿ ಪರಿಶೀಲನೆ ನಡೆಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸಿಸಿಟಿವಿ ಕ್ಯಾಮೆರಾಗಳು, ಮಹಿಳಾ ಭದ್ರತೆಗೆ ವಿಶೇಷ ಐಲ್ಯಾಂಡ್‌ಗಳು, ವಾಚ್ ಟವರ್‌ಗಳು, ಬ್ಯಾರಿಕೇಡ್‌ಗಳು ಹಾಗೂ ಹೊಸದಾಗಿ ಅಳವಡಿಸಿದ ಕ್ಯೂಆರ್ ಕೋಡ್‌ಗಳ ಮೂಲಕ ಟ್ರಾಫಿಕ್, ಪೊಲೀಸ್ ಠಾಣೆ ಮತ್ತು ತುರ್ತು ಸೇವೆಗಳ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ತಾತ್ಕಾಲಿಕವಾಗಿ ಹೆಚ್ಚುವರಿ 360 ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕೇಂದ್ರ ವಿಭಾಗದಲ್ಲೇ ಸುಮಾರು ಆರು ಸಾವಿರ ಸಿಸಿಟಿವಿಗಳ ಮೂಲಕ ನಿಗಾ ವಹಿಸಲಾಗಿದೆ.



