ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ನೂತನ ಕೌಶಲ್ಯ ವಿಶ್ವವಿದ್ಯಾಲಯವನ್ನು ಸಂಡೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಮಂಗಳವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ಬೆಂಗಳೂರು ಕೌಶಲ್ಯ ಶೃಂಗಸಭೆ’ ಉದ್ಘಾಟಿಸಿ ಮಾತನಾಡಿದರು.
ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯಿಂದ ಸ್ಟಾರ್ಟ್‌ಅಪ್ ರಾಜಧಾನಿಯಾಗಿ ರೂಪಾಂತರಗೊಂಡಿರುವ ಬೆಂಗಳೂರು ನಗರ ಈಗ ಭಾರತದ ಕೌಶಲ್ಯ ರಾಜಧಾನಿಯಾಗಿರುವುದು ಹೆಮ್ಮೆಯ ವಿಷಯ. ಕಳೆದ ವರ್ಷದ ಆಯ-ವ್ಯಯದಲ್ಲಿ ಘೋಷಿಸಲಾಗಿದ್ದ ಕರ್ನಾಟಕ ಕೌಶಲ್ಯಾಭಿವೃದ್ಧಿ ನೀತಿ 2025-32 ಅನ್ನು ಇಂದು ಬೆಂಗಳೂರು ಸ್ಕಿಲ್ ಸಮಿಟ್-2025 ಕಾರ್ಯಕ್ರಮದ ಮೂಲಕ ಕಾರ್ಯರೂಪಕ್ಕೆ ತರಲಾಗುತ್ತಿದೆ. ಈ 7 ವರ್ಷದ ಕಾರ್ಯತಂತ್ರದ ನೀಲನಕ್ಷೆಗೆ 4,432 ಕೋಟಿ ರೂ. ಅನುದಾನದ ಬೆಂಬಲ ನೀಡಲಾಗಿದ್ದು, ಕರ್ನಾಟಕವನ್ನು ಕೌಶಲ್ಯಭರಿತ ಹಾಗೂ ಭವಿಷ್ಯದ ಸವಾಲುಗಳಿಗೆ ಸನ್ನದ್ಧವಾಗಿಸುವುದು ಹಾಗೂ ಕಾರ್ಮಿಕ ಶಕ್ತಿಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಜಾಗತಿಕ ಮಟ್ಟಕ್ಕೆ ಕಾರ್ಮಿಕ ಶಕ್ತಿಯನ್ನು ಸಿದ್ಧಪಡಿಸಲು ಕರ್ನಾಟಕ ಸ್ಕಿಲ್ ಒಲಿಂಪಿಕ್ಸ್ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕೌಶಲ್ಯ ಸ್ಪರ್ಧೆಯಲ್ಲಿ 48 ಪದಕಗಳನ್ನು ಪಡೆದು ಭಾರತದಲ್ಲಿ ಕರ್ನಾಟಕ 2ನೇ ಸ್ಥಾನವನ್ನು ಪಡೆದಿದೆ ಹಾಗೂ 4 ಅಂತಾರಾಷ್ಟ್ರೀಯ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಐಟಿಐಗಳು ಹಾಗೂ ಜಿಟಿಟಿಸಿಗಳ ಮೂಲಕ ಸುಮಾರು 33,212 ಯುವಕರಿಗೆ ತರಬೇತಿಯನ್ನು ನೀಡಲಾಗಿದ್ದು, ಶಾಲಾ ಮಕ್ಕಳಿಗೆ ‘ನನ್ನ ವೃತ್ತಿ, ನನ್ನ ಆಯ್ಕೆ’ ಕಾರ್ಯಕ್ರಮದಡಿ, 35,000 ಮಕ್ಕಳಿಗೆ ತರಬೇತಿ ನೀಡಲಾಗಿದೆ. ಈ ವರ್ಷ, ಯೋಜನೆಯನ್ನು 500 ಶಾಲೆಗಳಿಗೆ ವಿಸ್ತರಿಸಿ 2.3 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿಯಿದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ 34 ಮೆಗಾ ಉದ್ಯೋಗ ಮೇಳಗಳನ್ನು ಹಮ್ಮಿಕೊಂಡಿದ್ದು, 1.43 ಲಕ್ಷ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದಾರೆ. 27,123 ಜನರಿಗೆ ಉದ್ಯೋಗಾವಕಾಶಗಳು ಲಭಿಸಿವೆ. ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಗೆ ತಕ್ಕಂತೆ ರಾಜ್ಯದ ಕೌಶಲ್ಯ ದೃಷ್ಟಿಯನ್ನು ಪರಿವರ್ತಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕೌಶಲ್ಯಾಭಿವೃದ್ಧಿಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ದೇಶದಲ್ಲಿ ಪ್ರತ್ಯೇಕವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಪ್ರಾರಂಭಿಸಿದ ರಾಜ್ಯಗಳಲ್ಲಿ ಒಂದಾಗಿದೆ. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯ ಮೂಲಕ ಕೌಶಲ್ಯವನ್ನು ರಾಜ್ಯದ ಮೂಲೆ ಮೂಲೆಗೂ ಕೊಂಡೊಯ್ದಿದ್ದೇವೆ. 5 ಲಕ್ಷ ಯುವಜನರನ್ನು ತಲುಪುವ ಗುರಿ ಹೊಂದಿದ್ದರೂ ನಾವು ಅದಕ್ಕೂ ಹೆಚ್ಚು ಜನರನ್ನು ತಲುಪಿದ್ದೇವೆ. ಯುವ ಯುಗ ಯೋಜನೆಯಡಿ ಸುಧಾರಿತ ಡಿಜಿಟಲ್ ಕೌಶಲ್ಯವನ್ನು 1.10 ಲಕ್ಷ ಜನರಿಗೆ ಒದಗಿಸುವ ಮೂಲಕ ಕರ್ನಾಟಕ ಕೈಗಾರಿಕಾ ಕ್ರಾಂತಿಯಲ್ಲಿ 4ನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.



