ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಈಗ ನೆರೆರಾಜ್ಯಗಳ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ನಗರ ಇಂದು ಕೇವಲ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿದೆ. ಐಟಿ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರಿನ ಇಂದಿನ ಸ್ಥಿತಿ ಏನಾಗಿದೆ ನೋಡಿ. ಅಲ್ಲಿನ ಜನ ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಆದರೆ ನಮ್ಮ ಹೈದರಾಬಾದ್‌ನಲ್ಲಿ ಅಂತಹ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.
ಮಳೆ ಬಂದರೆ ಚೆನ್ನೈ ಮತ್ತು ಮುಂಬೈ ನಗರಗಳು ಹೇಗೆ ಸ್ಥಗಿತಗೊಳ್ಳುತ್ತವೆ ಎಂಬುದನ್ನೂ ಉಲ್ಲೇಖಿಸಿದ ಅವರು, ಹೈದರಾಬಾದ್ ಅಂತಹ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಹೈದರಾಬಾದ್ ಅನ್ನು ಮಾಲಿನ್ಯ ಮುಕ್ತ ನಗರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ನಮಗೆ ಬೆಂಗಳೂರು ಅಥವಾ ಮುಂಬೈ ನಗರಗಳು ಸ್ಪರ್ಧಿಯಲ್ಲ. ನಮ್ಮ ಸ್ಪರ್ಧೆ ಸಿಂಗಾಪುರ ಮತ್ತು ಟೋಕಿಯೋದಂತಹ ಜಾಗತಿಕ ನಗರಗಳೊಂದಿಗೆ ಎಂದು ತಿಳಿಸಿದ್ದಾರೆ.



