ಬೆಂಗಳೂರು:- ಭೂಕುಸಿತದಿಂದ ಹಾನಿಗೊಳಗಾದ ಟ್ರ್ಯಾಕ್ ದುರಸ್ತಿ ಮಾಡಲಾಗಿದ್ದು, ಮಂಗಳೂರು, ಬೆಂಗಳೂರು ರೈಲು ಸಂಚಾರ ಪುನರಾರಂಭ ಆರಂಭವಾಗಲಿದೆ.
ಭಾರೀ ಮಳೆಯ ಹೊರತಾಗಿಯೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉಂಟಾಗಿದ್ದ ಭೂಕುಸಿತದಿಂದ ಹಾಳಾದ ರೈಲ್ವೆ ಹಳಿಯನ್ನು ದುರಸ್ತಿಪಡಿಸಿ, ರೈಲು ಓಡಾಟಕ್ಕೆ ಇಂದಿನಿಂದ ಅನುವು ಮಾಡಿಕೊಡಲಾಗಿದ್ದು, ಮಂಗಳೂರು-ಬೆಂಗಳೂರು ನಗರಗಳ ನಡುವಿನ ರೈಲು ಸಂಪರ್ಕ ಮತ್ತೆ ಸಾಧ್ಯವಾಗಿದೆ.
ಹೌದು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ವಿಭಾಗದಲ್ಲಿ ಕಡಗರವಳ್ಳಿ ಮತ್ತು ಯಡಕುಮಾರಿ ನಿಲ್ದಾಣಗಳ ನಡುವಿನ ಹಳಿಗಳ ಮರುಸ್ಥಾಪನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಜು.26 ರಂದು ಭೂಕುಸಿತ ಉಂಟಾದ ಹಿನ್ನೆಲೆ ರೈಲ್ವೆ ಹಳಿಯ ಕೆಳಗಡೆ ಮಣ್ಣು ಕುಸಿತವಾದ ಪರಿಣಾಮ ರೈಲ್ವೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.
ದುರಸ್ತಿ ಕಾರ್ಯ ಸಂಪೂರ್ಣವಾಗಿದ್ದು, ಆ.8 ಅಂದರೆ ಇಂದಿನಿಂದ ಪ್ಯಾಸೆಂಜರ್ ರೈಲುಗಳಿಗೆ ಅವಕಾಶ ಕಲ್ಪಿಸಿದ್ದು, ಮೊದಲು ಪ್ಯಾಸೆಂಜರ್ ರೈಲು ಇಂದು ಮೊದಲ ಪ್ಯಾಸೆಂಜರ್ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜೂ. ಗೋಮಟೇಶ್ವರ ಎಕ್ಸ್‌ಪ್ರೆಸ್ ಅನ್ನು 12:37 ಗಂಟೆಗೆ ಯಶಸ್ವಿಯಾಗಿ ರವಾನಿಸಲಾಯಿತು.
ಕಳೆದ 13 ದಿನಗಳಿಂದ ಬೆಂಗಳೂರು ಸೇರಿದಂತೆ ನಾನಾ ನಗರಗಳ ಜತೆಗೆ ಕರಾವಳಿ ರೈಲು ಸಂಪರ್ಕ ರದ್ದುಗೊಳಿಸಲಾಗಿತ್ತು ಆ.3 ಕ್ಕೆ ದುರಸ್ತಿ ಸಂಪೂರ್ಣವಾದ ಹಿನ್ನೆಲೆ ಭಾನುವಾರ ಹಾಗೂ ಸೋಮವಾರ ಖಾಲಿ ಗೂಡ್ಸ್ ರೈಲುಗಳ ಸಂಚಾರ ಮಾಡಲಾಗಿದ್ದು ಸಂಚಾರ ಯಶಸ್ವಿಯಾಗಿದೆ.
ಮಂಗಳವಾರದಿಂದ ಎರಡು ದಿನಗಳ ಕಾಲ ಸರಕುಗಳನ್ನೊಳಗೊಂಡ ಗೂಡ್ಸ್ ರೈಲು ಸಂಚಾರ ಯಶಸ್ವಿಯಾದ ಬಳಿಕ ಇಂದಿನಿಂದ ಪ್ರಯಾಣಿಕ ರೈಲುಗಳಿಗೆ ಅವಕಾಶ ಮಾಡಿಕೊಡಲಾಗಿದೆ.