ಬೆಂಗಳೂರು: ನಗರದಲ್ಲಿ ಸರಗಳ್ಳತನ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಈಗ ಪಾರ್ಕ್‌ಗಳನ್ನೇ ಅಪರಾಧಿಗಳು ಟಾರ್ಗೆಟ್ ಮಾಡುತ್ತಿರುವುದು ನಾಗರಿಕರಲ್ಲಿ ಭೀತಿಯನ್ನುಂಟು ಮಾಡಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿಯಲ್ಲಿ ಇರುವ ಪಾರ್ಕ್ ನಲ್ಲಿ ನಿನ್ನೆ ಸಂಜೆ ಭೀಕರ ಸರಗಳ್ಳತನ ನಡೆದಿದೆ. ಸಂಜೆ ಸುಮಾರು 5.30ರ ವೇಳೆಗೆ ವೃಕ್ಷೋದ್ಯಾನದಲ್ಲಿ ವಾಕ್ ಮಾಡುತ್ತಿದ್ದ 54 ವರ್ಷದ ಮಹಿಳೆಯನ್ನು ಗಮನಿಸಿದ ಆರೋಪಿಯು, ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿದ್ದಾನೆ. ಬಳಿಕ ಮಹಿಳೆಗೆ ಚಾಕು ತೋರಿಸಿ ಬೆದರಿಸಿ, ಕುತ್ತಿಗೆಗೆ ಕೈ ಹಾಕಿ ಸುಮಾರು 5 ಲಕ್ಷ ರೂ. ಮೌಲ್ಯದ 36 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಮಹಿಳೆಯ ಕುತ್ತಿಗೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಯ ಮಾಹಿತಿ ಪಡೆದ ತಕ್ಷಣ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ವೃಕ್ಷೋದ್ಯಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮೊದಲು ಬೈಕ್‌ನಲ್ಲಿ ಬಂದು ರಸ್ತೆಯಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳು, ಇದೀಗ ಪಾರ್ಕ್‌ಗಳಲ್ಲಿ ನಡೆದುಕೊಂಡು ಬರುವ ಮಹಿಳೆಯರನ್ನೇ ಗುರಿಯಾಗಿಸುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.



