ಬೆಂಗಳೂರು:– ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಓರ್ವನ ಬರ್ಬರ ಕೊಲೆ ನಡೆದಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗೊಲ್ಲಹಳ್ಳಿ ಬಳಿ ಜರುಗಿದೆ.
ಮಂಜ ಅಲಿಯಾಸ್ ನೇಪಾಳಿ ಮಂಜ ಕೊಲೆಯಾದ ರೌಡಿಶೀಟರ್. ಭಾನುವಾರ ಹಬ್ಬದ ದಿನ ಎಣ್ಣೆ ಪಾರ್ಟಿಗೆ ಹೋಗಿದ್ದ ವೇಳೆ, ಎರಡು ಬೈಕ್‍ನಲ್ಲಿ ಬಂದ ಹಂತಕರ ಪಡೆ ಕ್ಷಣಮಾತ್ರದಲ್ಲಿ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದೆ. ಲಾಂಗು ಮಚ್ಚುಗಳಿಂದ ತಲೆ, ಹೊಟ್ಟೆ, ಎದೆ ಕೈಗಳು ಹೀಗೆ ಸಿಕ್ಕ ಸಿಕ್ಕ ಕಡೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ.
ಹಳೇ ದ್ವೇಷದ ಹಿನ್ನೆಲೆ ಹೆಬ್ಬಗೋಡಿ ರೌಡಿಶೀಟರ್ ಜಗ್ಗ ಅಲಿಯಾಸ್ ಜಗದೀಶ್ ಮತ್ತವನ ಗ್ಯಾಂಗ್ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ, ಶ್ವಾನದಳ, ಸೋಕೋ ಟೀಮ್ ಭೇಟಿ ನೀಡಿದೆ. ಈಗಾಗಲೇ ಆರೋಪಿಗಳ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



