ಬೆಂಗಳೂರು:- ಬಿಬಿಎಂಪಿ ಕಟ್ಟಡ ಏರಿ ಮಹಿಳೆಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಉಮಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ವಿಜಯನಗರ ನಿವಾಸಿಯಾಗಿರುವ ಉಮಾ, ಕಳೆದ ಹಲವು ತಿಂಗಳಿಂದ ಸಹಾಯಕ್ಕಾಗಿ ಪಾಲಿಕೆಯ ಆರೋಗ್ಯ ವಿಭಾಗದ ಕಚೇರಿಗೆ ಹತ್ತಾರು ಬಾರಿ ಹೋಗಿ ಬಂದಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳು ಉಡಾಫೆಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ, ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದು, ಅದಕ್ಕಾಗಿ ನೇರ ಬಿಬಿಎಂಪಿ ಕಚೇರಿ ಕಟ್ಟಡವನ್ನೇ ಏರಿದ್ದರು. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಉಮಾ ಬಿಬಿಎಂಪಿ ಕಟ್ಟಡ ಏರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ತಲೆ ನೋವು ಎಂದು ಉಮಾ ದಾಸರಹಳ್ಳಿಯ ಬಿಬಿಎಂಪಿ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಪೇನ್ ಕಿಲ್ಲರ್ ಕೊಟ್ಟು ಕಳುಹಿಸಿದ್ದಾರೆ. ಆ ಬಳಿಕ ಕ್ರಮೇಣವಾಗಿ ತಲೆನೋವು ಜಾಸ್ತಿ ಆಗಿದೆ. ನಂತರ ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ಕೊಟ್ಟಾಗ ತಲೆಯೊಳಗೆ ಗಡ್ಡೆ ಆಗಿದೆ ಆಪರೇಷನ್ ಮಾಡಬೇಕು ಎಂದಿದ್ದಾರೆ. ತಕ್ಷಣವೇ ಆಪರೇಷನ್ ಮಾಡಿಸಿದ್ದಾರೆ. ಇದಾದ ಬಳಿಕ ಎಂದಿನಂತೆ ಕೆಲಸಕ್ಕೆ ಹೋಗಲು ಉಮಾರಿಗೆ ಸಾಧ್ಯವಾಗಿಲ್ಲ. ಗಂಡ ಇಲ್ಲ, ಒಬ್ಬ ಮಗ ಇದ್ದಾನೆ. ಹೇಗೆ ಬದುಕು ನಿರ್ವಹಣೆ ಮಾಡುವುದು ಎಂಬುದು ಉಮಾ ಚಿಂತೆ. ಹೀಗಾಗಿ ಪಾಲಿಕೆ ನಿಧಿಯಿಂದ ಸಹಾಯ ಕೇಳಲು ಹೋಗಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂದು ಉಮಾ ಹೇಳಿಕೊಂಡಿದ್ದಾರೆ.



