ಬೆಂಗಳೂರು: ಬೆಂಗಳೂರಿನ ಗಾಳಿಯ ಗುಣಮಟ್ಟ ಇಂದು 171ಕ್ಕೆ ದಾಖಲಾಗಿದ್ದು, ಇದು ಅನಾರೋಗ್ಯಕಾರಿ ಹಂತದಲ್ಲೇ ಮುಂದುವರಿದಿದೆ.
ಕಳೆದ ಹಲವು ದಿನಗಳಿಂದ ನಗರದಲ್ಲಿ ಗಾಳಿಯ ಗುಣಮಟ್ಟದಲ್ಲಿ ನಿರಂತರ ಏರುಪೇರಾಗುತ್ತಿದ್ದು, ಕೆಲವೊಮ್ಮೆ AQI 200ರ ಗಡಿ ದಾಟುತ್ತಿರುವುದು ನಗರವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಆಗಿದ್ದು, PM10 109ಕ್ಕೆ ಏರಿಕೆಯಾಗಿದೆ. PM2.5 ಎನ್ನುವುದು ಮಾನವನ ಕೂದಲಿನ ದಪ್ಪದ ಕೇವಲ ಶೇ.3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳು. ಇವು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತವಾಹಿನಿಗಳವರೆಗೆ ತಲುಪುವ ಸಾಮರ್ಥ್ಯ ಹೊಂದಿವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಬೆಂಗಳೂರಿನಲ್ಲಿ ಈ ಸೂಕ್ಷ್ಮ ಕಣಗಳ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಿತಿಗಿಂತ ಸುಮಾರು ಐದು ಪಟ್ಟು ಹೆಚ್ಚಿರುವುದು ಗಂಭೀರ ಚಿಂತೆಯ ವಿಷಯವಾಗಿದೆ.
PM10 ಕಣಗಳು ಮಾನವನ ಕೂದಲಿಗಿಂತ ಸುಮಾರು ಏಳು ಪಟ್ಟು ತೆಳುವಾದ ಧೂಳಿನ ಕಣಗಳಾಗಿದ್ದು, ಇವು ಸಹ ಉಸಿರಾಟ ವ್ಯವಸ್ಥೆಗೆ ತೀವ್ರ ಹಾನಿ ಉಂಟುಮಾಡುತ್ತವೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕಿಗಳಲ್ಲಿ ಸಣ್ಣ ಏರುಪೇರು ಕಂಡುಬಂದರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ. ಆರೋಗ್ಯ ತಜ್ಞರು ಮಕ್ಕಳು, ವೃದ್ಧರು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೊರಗೆ ತೆರಳುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಅಗತ್ಯವಿದ್ದರೆ ಮಾಸ್ಕ್ ಬಳಕೆ, ಅನಗತ್ಯ ವಾಹನ ಸಂಚಾರವನ್ನು ಕಡಿಮೆ ಮಾಡುವುದು ಹಾಗೂ ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ಈಗ ನಗರಕ್ಕೆ ಅತ್ಯಾವಶ್ಯಕ ಕ್ರಮಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಇತರ ನಗರಗಳ ಇಂದಿನ ಗಾಳಿಯ ಗುಣಮಟ್ಟ (AQI):
ಬೆಂಗಳೂರು – 171
ಮಂಗಳೂರು – 167
ಮೈಸೂರು – 102
ಬೆಳಗಾವಿ – 104
ಕಲಬುರ್ಗಿ – 69
ಶಿವಮೊಗ್ಗ – 167
ಬಳ್ಳಾರಿ – 170
ಹುಬ್ಬಳ್ಳಿ – 72
ಉಡುಪಿ – 144
ವಿಜಯಪುರ – 62



