ಬೆಂಗಳೂರು: ಕಳೆದ ಕೆಲ ದಿನಗಳ ಹೋಲಿಕೆಗೆ ಇಂದು ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಂತೆ ತೋರುವುದಾದರೂ, ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI) ನೋಡಿದರೆ ನಗರದ ಗಾಳಿ ಇನ್ನೂ ಅನಾರೋಗ್ಯಕಾರಿ ಮಟ್ಟದಲ್ಲೇ ಇದೆ.
ವಾಹನಗಳ ಹೊಗೆ, ಧೂಳು ಹಾಗೂ ನಿರಂತರ ನಿರ್ಮಾಣ ಚಟುವಟಿಕೆಗಳಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಇಂದು ಬೆಂಗಳೂರಿನ AQI 170 ದಾಖಲಾಗಿದ್ದು, ಡಿಸೆಂಬರ್ ತಿಂಗಳಿಗಿಂತ ಸ್ವಲ್ಪ ಸುಧಾರಣೆ ಕಂಡಿದೆ. ಆದರೆ ಕಳೆದ ತಿಂಗಳಲ್ಲಿ ಕೆಲ ದಿನಗಳಲ್ಲಿ AQI 200ರ ಗಡಿ ದಾಟಿದ್ದರಿಂದ ನಗರವಾಸಿಗಳಲ್ಲಿ ಆತಂಕ ಮೂಡಿತ್ತು. ಸಿಲ್ಕ್ ಬೋರ್ಡ್, ವೈಟ್ಫೀಲ್ಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಗಂಭೀರವಾಗಿ ಹದಗೆಟ್ಟಿತ್ತು. ಇತ್ತೀಚೆಗೆ ವಾತಾವರಣದಲ್ಲಿ ಅಲ್ಪ ಮಟ್ಟಿನ ಸುಧಾರಣೆ ಕಂಡರೂ, ಒಟ್ಟಾರೆ ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಈ ಪರಿಸ್ಥಿತಿ ಮುಂದುವರಿದರೆ ಬೆಂಗಳೂರು ದೆಹಲಿಯಂತಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ PM2.5 ಮಟ್ಟ 82 ಮತ್ತು PM10 ಮಟ್ಟ 108 ದಾಖಲಾಗಿದೆ. PM10 ಎನ್ನುವುದು ಮಾನವನ ಕೂದಲಿಗಿಂತ ಸುಮಾರು 7 ಪಟ್ಟು ತೆಳುವಾದ ಧೂಳಿನ ಕಣಗಳಾಗಿದ್ದರೆ, PM2.5 ಮಾನವನ ಕೂದಲಿನ ದಪ್ಪದ ಕೇವಲ ಶೇ. 3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳಾಗಿವೆ. ಇವು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತವನ್ನು ಸೇರುವ ಸಾಧ್ಯತೆ ಇರುವುದರಿಂದ, ಶ್ವಾಸಕೋಶ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
ರಾಜ್ಯದ ಇತರ ನಗರಗಳ ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI):
ಬೆಂಗಳೂರು – 170
ಮಂಗಳೂರು – 167
ಮೈಸೂರು – 89
ಬೆಳಗಾವಿ – 128
ಕಲಬುರ್ಗಿ – 68
ಶಿವಮೊಗ್ಗ – 138
ಬಳ್ಳಾರಿ – 168
ಹುಬ್ಬಳ್ಳಿ – 93
ಉಡುಪಿ – 162
ವಿಜಯಪುರ – 69
ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ತ್ವರಿತ ಕ್ರಮಗಳ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



