ಅತ್ಯುತ್ತಮ ಗ್ರಾಮ ಪಂಚಾಯಿತಿ ಪುರಸ್ಕಾರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ವರದಾನ ಎನಿಸಿರುವ ಮಹತ್ವಾಕಾಂಕ್ಷಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಪರಿಣಾಮ ಗದಗ ತಾಲೂಕಿನ ಅಂತೂರ ಗ್ರಾಮ ಪಂಚಾಯಿತಿ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯಿತಿ ಪುರಸ್ಕಾರ ಮುಡಿಗೇರಿಸಿಕೊಂಡಿದೆ.

Advertisement

2023-24ರ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಕಾಮಗಾರಿಗಳ ಪ್ರಗತಿ ಆಧಾರದ ಮೇಲೆ ತಾಲೂಕಿನ ಅಂತೂರ ಗ್ರಾ.ಪಂಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ನರೇಗಾ ಯೋಜನೆಯ ಎಲ್ಲ ವಿಭಾಗಗಳಲ್ಲೂ ಗಣನೀಯ ಸಾಧನೆಗೈದ ಅಂತೂರ ಗ್ರಾ.ಪಂ ಜನಸ್ನೇಹಿಯಾಗಿ ಹೊರಹೊಮ್ಮಿ ಇತರೆ ಪಂಚಾಯಿತಿಗಳಿಗೆ ಮಾದರಿಯಾಗಿದೆ.

ಅತ್ಯುತ್ತಮ ಗ್ರಾ.ಪಂ ಪ್ರಶಸ್ತಿಗೆ ಆಯ್ಕೆಯಾಗಿರುವ ಅಂತೂರ ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದಿದೆ. ಈ ಕಾಲಾವಧಿಯಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆ ಮಾಡುವಲ್ಲಿ ಗ್ರಾ.ಪಂ ಆಡಳಿತ ಮಂಡಳಿ, ಅಧಿಕಾರಿ-ಸಿಬ್ಬಂದಿ ವರ್ಗ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಪರಿಣಾಮ ಪ್ರಶಸ್ತಿ ಲಭಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಹಿರಿಮೆ ಹೆಚ್ಚಿಸುವಲ್ಲಿ ಅಂತೂರ ಸಫಲತೆ ಕಂಡಿದ್ದು, ನಾಡಿನ ಗಮನ ಸೆಳೆದಿದೆ.

ನರೇಗಾ ಯೋಜನೆ ಮಾನವ ದಿನಗಳ ಸೃಜನೆ, ನೊಂದಾಯಿತ ಕೂಲಿಕಾರರಿಗೆ ಕೆಲಸ ನೀಡುವಿಕೆ, ಕಾಮಗಾರಿಗಳ ಸೃಜನೆ ಮತ್ತು ಮುಕ್ತಾಯಗೊಳಿಸುವಿಕೆ, ವಿನೂತನ ಕಾಮಗಾರಿ ಅನುಷ್ಠಾನ, ಸಾಮಾಜಿಕ ಪರಿಶೋಧನೆ, ಆಕ್ಷೇಪಣೆ, ವಿಲೇವಾರಿ, ಆಡಾಕ್ ಸಮಿತಿ ಸಭೆಗೆ ಪೂದಕ ದಾಖಲೆಗಳನ್ನು ಒದಗಿಸಿ ಇತ್ಯರ್ಥ ಪಡಿಸಿರುವುದು, ಜಲ ಸಂರಕ್ಷಣೆ, ನೈಸರ್ಗಿಕ ನಿರ್ವಹಣೆಯ ಮಾನದಂಡದ ಅನುಸಾರ ಅಂತೂರ ಗ್ರಾ.ಪಂನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಉದ್ಯೋಗ ಖಾತರಿ ಯೋಜನೆ ಅಂತೂರಲ್ಲಿ ಕೇವಲ ಘೋಷಣೆಯಾಗಿ ಉಳಿದಿಲ್ಲ. ಇಲ್ಲಿ ನಿಜವಾಗಿಯೂ ಕಾರ್ಯರೂಪಕ್ಕೆ ಬಂದಿದ್ದು, ಅನೇಕ ವೈಯಕ್ತಿಕ, ಸಮುದಾಯ, ಶಾಲಾ ಸಂಬಂಧಿತ ಕಾಮಗಾರಿಗಳೂ ಸೇರಿದಂತೆ ವಿನೂತನ ಕಾಮಗಾರಿಗಳೂ ಸಹ ಆಗಿವೆ. ಇದರಿಂದ ಯೋಜನೆಗೆ ಮತ್ತಷ್ಟು ಮಹತ್ವ ಬಂದಂತಾಗಿದೆ.

**ಬಾಕ್ಸ್**

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನರೇಗಾ ಹಬ್ಬ-2025ರ ಕಾರ್ಯಕ್ರಮದಲ್ಲಿ ಅಂತೂರ ಗ್ರಾಮ ಪಂಚಾಯಿತಿಗೆ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಹಾಜರಿದ್ದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.


Spread the love

LEAVE A REPLY

Please enter your comment!
Please enter your name here