ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬಿತ್ತನೆಗೂ ಮೊದಲು ಸರಿಯಾಗಿ ಬೀಜೋಪಚಾರ ಮಾಡುವುದರಿಂದ ಮಣ್ಣಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಮುಳಗುಂದ ಕೃಷಿ ಅಧಿಕಾರಿ ರಾಜೇಶ್ವರಿ ಚಿಣಿವಾಳ ಹೇಳಿದರು.
Advertisement
ಅವರು ಪಟ್ಟಣದ ಕೃಷಿ ಕೇಂದ್ರದಲ್ಲಿ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಟ್ರಿಕೋಡರ್ಮಾ ಜೀವಾಣು, ರೈಜೋಬಿಯಮ್ ಜೀವಾಣು ಲೇಪನ ಮಾಡುವುದರಿಂದ ದ್ವಿದಳ ಧಾನ್ಯಗಳ ಬೆಳೆಗಳಲ್ಲಿ ಸಾರಜನಕ ಸ್ಥಿರೀಕರಣ ಹಾಗೂ ಶಿಲೀಂದ್ರ ರೋಗಗಳ ನಿಯಂತ್ರಣ ಸಾಧ್ಯ. ಇದರಿಂದ ರೈತರು ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕೃಷಿ ಸಖಿ ಲಕ್ಷ್ಮಿ, ಕಾಶಿಮ್ ಹಾದಿಮನಿ, ಮಹ್ಮದಶಫಿ ದೊಡ್ಡಮನಿ, ಪರಪ್ಪ ಕುಂದಗೋಳ, ಅನಿಲ ಬಟ್ಟೂರ, ಶಶಿಧರ ಮರಿದೇವರಮಠ, ಮಂಜುನಾಥ ಮರಿದೇವರಮಠ ಮುಂತಾದವರಿದ್ದರು.