ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ತುಂಗಭದ್ರಾ ನದಿಯಲ್ಲಿ ಭದ್ರಾ ಡ್ಯಾಂ ನೀರು ಹರಿಬಿಟ್ಟ ಕಾರಣ ತಾಲೂಕಿನ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ತಾಲೂಕಿನ ಹಲುವಾಗಲು ಹಾಗೂ ಗರ್ಭಗುಡಿಯ ಮಧ್ಯೆ ಒಟ್ಟಾರೆ ಅಂದಾಜು 500 ಎಕರೆಯಷ್ಟು ಪ್ರದೇಶ ಜಲಾವೃತವಾಗಿದೆ. ತುಂಗಭದ್ರಾ ನದಿ ಪಕ್ಕದಲ್ಲಿರುವ ಶಿವಯ್ಯನ ಹಳ್ಳಕ್ಕೆ ನದಿ ನೀರು ನುಗ್ಗಿದ ಪರಿಣಾಮ, ಎರಡೂ ಭಾಗದಲ್ಲಿ 3 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ನಿಟ್ಟೂರಿನಿಂದ ನಂದ್ಯಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಸುಮಾರು 50 ಎಕರೆಯಷ್ಟು ಭತ್ತ ನಾಟಿ ಮಾಡಿರುವ ಜಮೀನುಗಳಿಗೆ ನೀರು ನುಗ್ಗಿದೆ. ಭದ್ರಾ ಜಲಾಶಯದಿಂದ 65000 ಕ್ಯೂಸೆಕ್‌ನಷ್ಟು ನೀರು ಬಿಟ್ಟ ಪರಿಣಾಮ ತಾಲೂಕಿನ ನದಿ ಪಾತ್ರದ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದೆ. ನೀರಿನ ಪ್ರಮಾಣ ಹೆಚ್ಚಾದರೆ ನಿಟ್ಟೂರು ಗ್ರಾಮದ 8 ಮನೆಗಳು ಸೇರಿದಂತೆ ನದಿ ಪಾತ್ರದ ಗ್ರಾಮಗಳ ಜಮೀನುಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ತಹಸೀಲ್ದಾರ್ ಬಿ.ವಿ. ಗಿರೀಶ್ ಬಾಬು ತಿಳಿಸಿದ್ದಾರೆ.


