ವಿಜಯಸಾಕ್ಷಿ ಸುದ್ದಿ, ಕಲಬುರ್ಗಿ : ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಭಾರತೀಯ ಸಂಸ್ಕೃತಿ ಎಲ್ಲರನ್ನು ಒಗ್ಗೂಡಿಸುವುದೇ ಆಗಿದೆ ಹೊರತು ವಿಘಟಿಸುವುದಲ್ಲ. ಶುದ್ಧ ಮನಸ್ಸಿನಿಂದ ಖಾದಿ-ಖಾಕಿ-ಖಾವಿ ಕಾಯಕ ಮಾಡಿದರೆ ಜನಕಲ್ಯಾಣದ ಜೊತೆಗೆ ಲೋಕ ಕಲ್ಯಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಸಂಜೆ ತಾಲೂಕಿನ ಶ್ರೀನಿವಾಸ ಸರಡಗಿ ಚಿನ್ನದಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಡಾ.ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳವರ ಷಷ್ಟಿಪೂರ್ತಿ ಅಂಗವಾಗಿ ಜರುಗಿದ ಭಕ್ತ ಹಿತ ಚಿಂತನ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸ್ವಾರ್ಥರಹಿತ ಬದುಕಿಗೆ ಬೆಲೆಯಿದೆ ಮತ್ತು ಬಲವಿದೆ. ಹಿರಿಯರ ಮೌಲ್ಯಾಧಾರಿತ ಚಿಂತನಗಳು ಬಾಳಿನ ಆಶಾಕಿರಣವಾಗಿವೆ. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಶಸ್ತ್ರ ಪ್ರಭುತ್ವ ಮತ್ತು ಅರ್ಥಗಳು ಅಜ್ಞಾನಿಯ ಕೈಯಲ್ಲಿದ್ದರೆ ಸರ್ವನಾಶ. ಅದೇ ಸಜ್ಜನರ ಕೈಯಲ್ಲಿದ್ದರೆ ಜನಹಿತಾತ್ಮಕ ಕಾರ್ಯಗಳು ನಡೆಯುತ್ತವೆ. ಸಮಾಜದ ಓರೆ-ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಗುರುವಿನ ಧರ್ಮವಾಗಿದೆ. ಪ್ರಾಪಂಚಿಕ ಸಂಬಂಧಗಳು ಕೆಲವು ಸಂದರ್ಭಗಳಲ್ಲಿ ಕೆಡಬಹುದು. ಆದರೆ ಗುರು ಶಿಷ್ಯರ ಸಂಬಂಧ ಚಿರಂತನ ಮತ್ತು ನಿತ್ಯ ನೂತನ.
ನೇತೃತ್ವ ವಹಿಸಿದ ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಬೇಕು. ಬಾಲ್ಯದಲ್ಲಿ ಜ್ಞಾನ, ಯೌವನದಲ್ಲಿ ಸಂಪತ್ತು ಮತ್ತು ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಂಡು ಬಾಳುವುದು ಶ್ರೇಷ್ಠ. ಸುಳ್ಳಿಗೆ, ಮೋಸಕ್ಕೆ ಹಲವು ದಾರಿ.
ಆದರೆ ಧರ್ಮಕ್ಕೊಂದೇ ದಾರಿ. ಅದುವೇ ಹೆದ್ದಾರಿ. ಯುವ ಜನಾಂಗದಲ್ಲಿ ಅದ್ಭುತ ಶಕ್ತಿಯಿದೆ. ಆ ಶಕ್ತಿ ಜನ ಹಿತಕ್ಕಾಗಿ ಮೀಸಲಾಗಿರಲಿ. ಸಮಾಜದಲ್ಲಿ ಬೆಳೆಯುತ್ತಿರುವ ದುಷ್ಟ ಶಕ್ತಿಗಳು ನಿರ್ನಾಮಗೊಂಡು ಸಾತ್ವಿಕ ಸಮಾಜ ಕಟ್ಟಿ ಬೆಳೆಸುವ ಸಂಕಲ್ಪ ಎಲ್ಲರದಾಗಲಿ. ಶ್ರೀ ರಂಭಾಪುರಿ ಜಗದ್ಗುರುಗಳವರ ಅಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲೆ ಸದಾ ಇರಲೆಂದರು.
ಸಮಾರಂಭದಲ್ಲಿ ಹೊನ್ನಕಿರಣಗಿ ಚಂದ್ರಗುಂಡ ಶಿವಾಚಾರ್ಯರು ಮತ್ತು ಆಲಮೇಲ ಚಂದ್ರಶೇಖರ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು. ಕಲಬುರ್ಗಿ ಡಾ.ರಾಜಶೇಖರ ಶಿವಾಚಾರ್ಯರು, ತೊನಸನಹಳ್ಳಿ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ಯಂಕಂಚಿ ರುದ್ರಮುನಿ ಶಿವಾಚಾರ್ಯರು, ಓಂಕಾರ ಬೆನ್ನೂರು ಸಿದ್ಧರೇಣುಕ ಶಿವಾಚಾರ್ಯರು, ಮಳಖೇಡ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಹಲಕರಟಿ ರಾಜಶೇಖರ ಶಿವಾಚಾರ್ಯರು, ಆಳಂದ ಸಿದ್ಧಲಿಂಗ ಶಿವಾಚಾರ್ಯರು, ಮುಳವಾಡ ಸಿದ್ಧಲಿಂಗ ಶಿವಾಚಾರ್ಯರು, ಹನುಮಾಪುರ ಸೋಮಶೇಖರ ಶಿವಾಚಾರ್ಯರು, ಸರಡಗಿ ವೀರಭದ್ರ ಶಿವಾಚಾರ್ಯರು, ಗಿರೆಪ್ಪಾ ಮುತ್ಯಾ, ರಾಜು ಭೀಮಳ್ಳಿ, ಶಿವಶರಣಪ್ಪ ಸೀರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಗುರುಲಿಂಗಯ್ಯ ಹಿತ್ತಲಶಿರೂರು ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ಹಣಮಂತ್ರಾಯ ಅಟ್ಟೂರು ಸ್ವಾಗತಿಸಿದರು. ನಾಗಲಿಂಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಟೇಷನ್ ಬಬಲಾದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶಿವಮೂರ್ತಿ ಶಿವಾಚಾರ್ಯರು ನಿರೂಪಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ವಿಕಾಸಗೊಳ್ಳಲು ಧರ್ಮದ ದಶ ಸೂತ್ರಗಳನ್ನು ಬೋಧಿಸಿದ್ದಾರೆ. ಅವರ ವಿಚಾರ ಧಾರೆಗಳು ಜೀವನ ವಿಕಾಸಕ್ಕೆ ಭದ್ರ ಅಡಿಪಾಯವಾಗಿವೆ. ಡಾ.ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಎಲ್ಲೆಡೆ ಸಂಚರಿಸಿ ವೀರಶೈವ ಧರ್ಮ ಸಂಸ್ಕೃತಿಯನ್ನು ಪಸರಿಸುವ ಮೂಲಕ ಜನ ಸಮುದಾಯವನ್ನು ಜಾಗೃತಗೊಳಿಸುತ್ತಿರುವುದು ಸಂತೋಷದ ಸಂಗತಿ. ಇಂದು ಷಷ್ಟಿಪೂರ್ತಿ ಆಚರಿಸಿಕೊಳ್ಳುತ್ತಿರುವ ಶ್ರೀಗಳು ಮುಂದೊಂದು ದಿನ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಪ್ರಾಪ್ತವಾಗಲೆಂದು ಡಾ. ವೀರಸೋಮೇಶ್ವರ ಜಗದ್ಗುರುಗಳು ಶುಭ ಹಾರೈಸಿದರು.
Advertisement