ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕೆಲವೇ ತಿಂಗಳುಗಳಲ್ಲಿ ಗೊಜನೂರ ಗ್ರಾಮ ಪಂಚಾಯಿತಿ ರಾಜೀವಗಾಂಧಿ ಸೇವಾ ಕೇಂದ್ರದ ಗ್ರಾ.ಪಂ ಕಟ್ಟಡ ಮತ್ತು ಡಿಜಿಟಲ್ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್. ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶನಿವಾರ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಮತ್ತು ಯಳವತ್ತಿ ಗ್ರಾಮ ಪಂಚಾಯಿತಿಯಲ್ಲಿಯ ವಿವಿಧ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಪರಿಶೀಲಿಸಿದರು. ತಾಲೂಕು ಪಂಚಾಯಿತಿಯ ಅನಿರ್ಬಂಧಿತ ಅನುದಾನ 5 ಲಕ್ಷ ರೂ.ಗಳಲ್ಲಿ ಪ್ರಗತಿಯಲ್ಲಿರುವ ಡಿಜಿಟಲ್ ಗ್ರಂಥಾಲಯ ಕಟ್ಟಡ ಕಾಮಗಾರಿ ವೀಕ್ಷಿಸಿ, ಈಗಾಗಲೇ 5 ಲಕ್ಷ ರೂ.ಗಳ ಅನುದಾನದಲ್ಲಿ ನಡೆಸುತ್ತಿರುವ ಕಟ್ಟಡ ಕಾಮಗಾರಿ ಉತ್ತಮ ಹಂತದಲ್ಲಿದೆ. ಸಂಬಂಧಿಸಿದ ಗ್ರಾ.ಪಂನವರು ತಮ್ಮ ಹಂತದ ಅನುದಾನವನ್ನು ಬಳಕೆ ಮಾಡಿಕೊಂಡು ಕಟ್ಟಡ ಪೂರ್ಣಗೊಳಿಸಲು ಸೂಚಿಸಿದರು.
ಉದ್ಯೋಗ ಖಾತ್ರಿ ಮತ್ತು ಆರ್‌ಜಿಪಿಎಸ್‌ವೈ ಒಗ್ಗೂಡಿಸುವಿಕೆಯ ಒಟ್ಟು 50 ಲಕ್ಷ ರೂ.ಗಳ ಅನುದಾನದಲ್ಲಿ ಪ್ರಗತಿ ಹಂತದಲ್ಲಿರುವ ರಾಜೀವಗಾಂಧಿ ಸೇವಾ ಕೇಂದ್ರದ ಕಾಮಗಾರಿ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಯಳವತ್ತಿ ಗ್ರಾಮ ಪಂಚಾಯಿತಿಯಿಂದ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬೂದು ನೀರು ನಿರ್ವಹಣೆ (ಎಲ್‌ಡಬ್ಲುಎಂ) ಕಾಮಗಾರಿ ವೀಕ್ಷಿಸಿ ಅಗತ್ಯ ಸಲಹೆ ನೀಡಿದರು. ತಾಲೂಕು ಪಂಚಾಯತಿ ಅನುದಾನದಲ್ಲಿ ಗ್ರಾಮದ ಪ್ರಾಥಮಿಕ ಶಾಲೆಗೆ ವಿತರಣೆ ಮಾಡಲಾದ ಸ್ಮಾರ್ಟ್ ಕ್ಲಾಸ್ ರೂಮ್‌ನ ಸಲಕರಣೆ, ಡೆಸ್ಕ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರಬರಾಜು ಮಾಡಲಾದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಪರಿಶೀಲಿಸಿದರು. ಆರೋಗ್ಯ ಕೇಂದ್ರದ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಗ್ರಾಮದಲ್ಲಿಯ ಜೆಜೆಎಂ ಯೋಜನೆಯ ಮೇಲ್ಮಟ್ಟದ ಜಲ ಸಂಗ್ರಹಗಾರ ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಪಿಡಿಒ ಸವಿತಾ ಹುನಗುಂದ, ಎಇಇ ಮಾರುತಿ ರಾಠೋಡ, ಕಿರಿಯ ಅಭಿಯಂತರಾದ ಸಂತೋಷ ಲಮಾಣಿ, ಆರೀಫ್ ಹಿರೇಹಾಳ, ಕಾರ್ಯದರ್ಶಿ ವೈ.ಬಿ. ಮಾದರ, ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ತಾಂತ್ರಿಕ ಸಹಾಯಕ ಶ್ರೀನಿವಾಸ ಕಲಾಲ, ಬಸವರಾಜ ಅರ್ಕಸಾಲಿ, ಬಿಎಫ್‌ಟಿ ಸತೀಶ ಅರಿಷಿಣದ, ಶಂಭುಲಿಂಗಯ್ಯ ಹಿರೇಮಠ ಇತರರಿದ್ದರು.
ಮಕ್ಕಳ ಓದಿಗೆ ಸಂತಸ
ಯಳವತ್ತಿ ಗ್ರಾಮದ ಸುಸಜ್ಜಿತ ಡಿಜಿಟಲ್ ಲೈಬ್ರರಿಗೆ ಭೇಟಿ ನೀಡಿದ ಜಿಪಂ ಸಿಇಓ ಭರತ್ ಎಸ್, ಗ್ರಂಥಾಲಯದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಹಿತಿ ಪಡೆದರು. ಮಕ್ಕಳಿಗೆ ರಜೆ ದಿನಗಳಲ್ಲಿ ಕೇವಲ ಟಿ.ವಿ., ಮೊಬೈಲ್ ನೋಡುವುದನ್ನು ಬಿಟ್ಟು ಗ್ರಂಥಾಲಯದಲ್ಲಿ ಪುಸ್ತಕ ಓದಲು ಹೇಳಿದರು. ಮಕ್ಕಳು ನಿರರ್ಗಳವಾಗಿ ಪುಸ್ತಕ ಓದುವುದನ್ನು ಕೆಲ ಸಮಯ ಆಲಿಸಿ, ಗ್ರಾಮದ ಮಕ್ಕಳ ಓದುವ ಆಸಕ್ತಿ ಮತ್ತು ಪೂರಕ ವಾತಾವರಣ, ವ್ಯವಸ್ಥೆಗೆ ಕಾರಣರಾದ ಗ್ರಾ.ಪಂ ಮತ್ತು ಗ್ರಂಥಾಲಯ ಮೇಲ್ವಿಚಾರಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.