ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆಯ ನಿಮಿತ್ತ ವಿಶೇಷ ಮತಗಟ್ಟೆಗಳಲ್ಲಿ ವಿಶಿಷ್ಟ ಚಿತ್ರ ಬಿಡಿಸಿ ಇದೇ ಏಪ್ರಿಲ್ ಮಾಸದ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಭರತ್ ಎಸ್ ತಿಳಿಸಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಸ್ವೀಪ್ ಸಮಿತಿಯಿಂದ ಮಾದರಿ ಮತಗಟ್ಟೆಗಳ ನಿರ್ಮಾಣಕ್ಕಾಗಿ ಚಿತ್ರಕಲಾ ಶಿಕ್ಷಕರೊಂದಿಗೆ ಸಭೆ ಜರುಗಿಸಿ ಮಾತನಾಡಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ `ಚುನಾವಣಾ ಪರ್ವ ದೇಶದ ಗರ್ವ’ ಎಂಬ ಘೋಷವಾಕ್ಯದಂತೆ ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸಖಿ-5, ಯುವ-1, ಪಿಡಬ್ಲುಡಿ-1, ಧ್ಯೇಯ ಆಧಾರಿತ-1 ಥೀಮ್-1ರಂತೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ 9 ಮತಗಟ್ಟೆಗಳಂತೆ, ಜಿಲ್ಲೆಯಲ್ಲಿ ಒಟ್ಟಾರೆಯಾಗಿ 36 ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮತಗಟ್ಟೆಗಳನ್ನು ವಿಶಿಷ್ಟವಾಗಿ ಚಿತ್ರಗಳನ್ನು ಬಿಡಿಸಲು ಮತ್ತು ಇದೇ ಏಪ್ರಿಲ್ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸಲು ಅವರು ಸಲಹೆ ನೀಡಿದರು.
ವಿಶಿಷ್ಟ ಮತಗಟ್ಟೆಗಳಲ್ಲಿ ಬಿಡಿಸುವ ಚಿತ್ರಗಳಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಚಿತ್ರಗಳನ್ನು ಬಿಡಿಸುವ ಪೂರ್ವದಲ್ಲಿ ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಗಮನಕ್ಕೆ ತಂದು, ಅವರಿಂದ ಅನುಮತಿ ಪಡೆದ ಚಿತ್ರಗಳನ್ನು ಮಾತ್ರ ಮತಗಟ್ಟೆಗಳಲ್ಲಿ ಬಿಡಿಸಲು ಕ್ರಮವಹಿಸಬೇಕೆಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಬಿ. ದೇವರಮನಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರು ಹಾಜರಿದ್ದರು.