ಬೆಂಗಳೂರು: ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಶೋನಲ್ಲಿ ಕಿಚ್ಚು ಹೆಚ್ಚಾಗಿದೆ. 89ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳು ಯಾರು ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ ಅಂತ ಕುತೂಹಲ ಮೂಡಿದೆ. ಇದರ ಬೆನ್ನಲ್ಲೇ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಮೋಸ ಮಾಡಿದ್ರಾ ಭವ್ಯಾ ಎಂಬ ಅನುಮಾನ ಮೂಡಿದೆ.
ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ತ್ರಿವಿಕ್ರಂ, ಭವ್ಯಾ, ರಜತ್, ಮೋಕ್ಷಿತಾ, ಧನರಾಜ್ ಇದ್ದರು. ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಮೇಲೆ ಹಗ್ಗಕ್ಕೆ ಬಾಲ್ಗಳ ಗೊಂಚಲನ್ನು ಹಾಕಿ ಪ್ರತಿಯೊಂದಕ್ಕೂ ನಂಬರ್ ನೀಡಲಾಗಿತ್ತು. ಬಿಗ್ ಬಾಸ್ ಹೇಳಿದ ನಂಬರ್ಗಳ ಗೊಂಚಲ ಬಾಲ್ಗಳನ್ನು ಕಿತ್ತುಕೊಂಡು ಅದನ್ನು ಎದುರಿರುವ ಬಾಸ್ಕೆಟ್ಗೆ ಹಾಕಬೇಕು.
ಮೊದಲ ಸುತ್ತಿನಲ್ಲಿ ರಜತ್, ತ್ರಿವಿಕ್ರಂ ಮೊದಲಾದವರಿಗೆ ಬಾಲ್ ಸಿಕ್ಕಿತ್ತು. ಆದರೆ, ಮೋಕ್ಷಿತಾ ಹಾಗೂ ಭವ್ಯಾ ಕೈಗೆ ಯಾವುದೇ ಬಾಲ್ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಬಾಲ್ ಒಂದು ಉರುಳಿಕೊಂಡು ಭವ್ಯಾ ಕಾಲ ಬಳಿ ಬಂತು. ಇದನ್ನು ಭವ್ಯಾ ತೆಗೆದುಕೊಂಡು ಸೂಚಿಸಿದ ಬುಟ್ಟಿಗೆ ಹಾಕಿದರು. ಈ ಮೂಲಕ ಅವರು ಸೇಫ್ ಆದರು. ಬಾಲ್ ಸಿಗದೇ ಇದ್ದ ಮೋಕ್ಷಿತಾ ಅವರು ಆಟದಿಂದ ಔಟ್ ಆದರು.
ಈಗ ಇರುವ ವಾದ ಏನೆಂದರೆ ಆ ಬಾಲ್ನ ಭವ್ಯಾ ಅವರು ಕಿತ್ತುಕೊಂಡೇ ಇರಲಿಲ್ಲ. ಉಸ್ತುವಾರಿಗಳಾದ ಮಂಜು ಹಾಗೂ ಚೈತ್ರಾ ಅವರು ಮಾಡಿದ ನಿಯಮದ ಪ್ರಕಾರ ಸ್ಪರ್ಧಿಗಳು ಗೊಂಚಲಿಂದ ತೆಗೆದುಕೊಂಡ ಬಾಲ್ನ ಮಾತ್ರ ಹಾಕಬೇಕು ಅಥವಾ ಬೇರೆ ಯಾವುವಾದರೂ ಸ್ಪರ್ಧಿಗಳು ಬಾಲ್ನ ನೀಡಿದರೆ ಅದನ್ನು ತೆಗೆದುಕೊಂಡು ಹಾಕಬಹುದು. ಆದರೆ, ಇಲ್ಲಿ ಭವ್ಯಾ ಅವರು ಯಾವುದೇ ಬಾಲ್ನ ತೆಗೆದುಕೊಂಡೇ ಇರಲಿಲ್ಲ. ಹೀಗಾಗಿ, ಅವರು ಮೊದಲ ಸುತ್ತಲ್ಲೇ ಹೊರಹೋಗಬೇಕಿತ್ತು. ಆದರೆ, ಅವರು ತಮಗೆ ಸಿಕ್ಕ ಬಾಲ್ನ ಟಾರ್ಗೆಟ್ಗೆ ಹಾಕಿ ಸೇವ್ ಆದರು.
ಆ ಬಳಿಕ ರಜತ್ ಮತ್ತೊಂದು ವಿಚಾರ ರಿವೀಲ್ ಮಾಡಿದರು. ‘ಅದು ಬಿಗ್ ಬಾಸ್ ಹೇಳಿದ ನಂಬರ್ನ ಗೊಂಚಲ ಬಾಲ್ ಅಲ್ಲವೇ ಅಲ್ಲ. ಬೇರೆಯ ಗೊಂಚಲಿಂದ ಬಿದ್ದ ಬಾಲ್ ಅದು. ನನಗೆ ಕಂಡಿದೆ. ಆದರೆ, ಅಲ್ಲಿ ಅರಚಾಡಿಕೊಂಡು ನನ್ನ ಆಟ ಹಾಳು ಮಾಡಲು ನನಗೆ ಇಷ್ಟ ಇರಲಿಲ್ಲ’ ಎಂದು ರಜತ್ ಹೇಳಿದ್ದಾರೆ. ಇದನ್ನು ಉಸ್ತುವಾರಿಗಳು ಸರಿಯಾಗಿ ನೋಡಿಕೊಂಡಿಲ್ಲ ಎಂದು ಆರೋಪಿಸಲಾಗುತ್ತಿದೆ.