ಭಾವೈಕ್ಯತಾ ದಿನಾಚರಣೆ ನಾಳೆ

0
bhavaikyata dina
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡ ಕುಲಗುರುಗಳು, ತ್ರಿವಿಧ ದಾಸೋಹಿಗಳು, ಬಸವ ತತ್ವದ ದಂಡನಾಯಕರು ಹಾಗೂ ಭಾವೈಕ್ಯತೆಯ ಹರಿಕಾರರೂ ಆದ ಪೂಜ್ಯಶ್ರೀ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೭೫ನೇ ಜಯಂತಿ ಅಂಗವಾಗಿ `ಭಾವೈಕ್ಯತಾ ದಿನಾಚರಣೆ’ ಕಾರ್ಯಕ್ರಮ ದಿ. ೨೧ರಂದು ಬುಧವಾರ ಮುಂಜಾನೆ ೧೦.೩೦ಕ್ಕೆ ನಗರದ ತೋಂಟದಾರ್ಯ ಮಠದಲ್ಲಿ ಜರುಗಲಿದೆ.

Advertisement

ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಸಮ್ಮುಖವನ್ನು ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಶಿರೋಳ-ಭೈರನಹಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು, ಆಳಂದದ ಕೋರಣೇಶ್ವರ ಮಹಾಸ್ವಾಮಿಗಳು, ಸಂಡೂರಿನ ಪ್ರಭು ಮಹಾಸ್ವಾಮಿಗಳು, ಅರಸೀಕೆರೆಯ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳು ವಹಿಸುವರು.

ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಕುರಿತು ಸಾಹಿತಿ ಬಿ.ಆರ್. ಪೊಲೀಸಪಾಟೀಲ ರಚಿಸಿದ `ಉರಿಯ ಗದ್ದುಗೆ’ ಕಾದಂಬರಿ ಹಾಗೂ ಭೋಜರಾಜ ಸೊಪ್ಪಿಮಠ ಸಂಪಾದಿಸಿದ `ಕರುಣಾಮಯಿ ಭಾಗ-೨’ ಕೃತಿಗಳು ಬಿಡುಗಡೆಗೊಳ್ಳುವವು. ಬಸವ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಡಾ. ವೀರಣ್ಣ ರಾಜೂರ ಹಾಗೂ ಡಾ. ಎನ್.ಜಿ. ಮಹಾದೇವಪ್ಪ ಅವರನ್ನು ಸಂಮಾನಿಸಲಾಗುವುದು.

ಅತಿಥಿಗಳಾಗಿ ನ್ಯೂಜಿಲೆಂಡ್‌ನ ಬಸವ ಸಮಿತಿಯ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ, ಪತ್ರಕರ್ತ ಸನತ್‌ಕುಮಾರ ಬೆಳಗಲಿ, ಸಾಹಿತಿಗಳಾದ ಅಕ್ಬರ ಕಾಲಿಮಿರ್ಚಿ ಆಗಮಿಸುವರು. ಜ. ತೋಂಟದಾರ್ಯ ವಿದ್ಯಾಪೀಠದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ ೬.೩೦ಕ್ಕೆ ಸಾಣೇಹಳ್ಳಿ ಶಿವ ಸಂಚಾರ ನಾಟಕ ಕಲಾತಂಡದ `ಕಲ್ಯಾಣದ ಬಾಗಿಲು’ ನಾಟಕ ಪ್ರದರ್ಶನ ಜರುಗುವುದು.

ತೋಂಟದಾರ್ಯ ಮಠದ ಸದ್ಭಕ್ತರು, ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿಷ್ಯರು, ಬಸವಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಲು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಭಾವೈಕ್ಯತೆಯ ಹರಿಕಾರರಾಗಿದ್ದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೭೫ನೇ ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ ೮.೩೦ಕ್ಕೆ ಭೀಷ್ಮ ಕೆರೆಯ ಬಸವೇಶ್ವರ ಪುತ್ಥಳಿಯಿಂದ ಶ್ರೀ ತೋಂಟದಾರ್ಯ ಮಠದವರೆಗೆ ಭಾವೈಕ್ಯತಾ ಯಾತ್ರೆ ಜರುಗುವುದು.


Spread the love

LEAVE A REPLY

Please enter your comment!
Please enter your name here