ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದ ಘಟನೆ ಭದ್ರತಾ ವ್ಯವಸ್ಥೆಯ ಮೇಲಿನ ಗಂಭೀರ ಪ್ರಶ್ನೆಗಳನ್ನು ಎತ್ತಿ ತೋರಿಸಿದೆ.
ಭೋಪಾಲ್‌ನ ಏಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಲಿಫ್ಟ್‌ನಿಂದ ಇಳಿಯುವ ವೇಳೆ, ಮಾಸ್ಕ್ ಧರಿಸಿದ್ದ ಅಪರಿಚಿತ ವ್ಯಕ್ತಿ ಆಕೆಯ ಕುತ್ತಿಗೆಯಿಂದ ಮಂಗಳಸೂತ್ರವನ್ನು ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿ ಮಹಿಳೆಯೊಂದಿಗೆ ಲಿಫ್ಟ್‌ನಲ್ಲೇ ಪ್ರಯಾಣಿಸಿದ್ದ. ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆಯೇ ಆತ ಆಕೆಯ ಚಿನ್ನದ ಸರವನ್ನು ಕಸಿದು ವೇಗವಾಗಿ ಓಡಿಹೋಗಿದ್ದಾನೆ. ಮಹಿಳೆ ಕಿರುಚುತ್ತಾ ಬೆನ್ನಟ್ಟಲು ಯತ್ನಿಸಿದರೂ ಆರೋಪಿ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ.
ಆಸ್ಪತ್ರೆಯೊಳಗೆ ಇಂತಹ ಘಟನೆ ಸಂಭವಿಸಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವಂತೆ ಆಗ್ರಹ ಕೇಳಿಬರುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.



