ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇದೇ ಜ. 19, 20, 21ರಂದು ಗಜೇಂದ್ರಗಡ ಪಟ್ಟಣದಲ್ಲಿ ಗದಗ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ತನ್ನಿಮಿತ್ತ ಹೊರಟಿರುವ ಭುವನೇಶ್ವರಿ ತಾಯಿ ರಥಯಾತ್ರೆಯನ್ನು ಬರಮಾಡಿಕೊಳ್ಳುವ ಪೂರ್ವಭಾವಿ ಸಭೆ ಜಕ್ಕಲಿ ಗ್ರಾಮ ಪಂಚಾಯಿತಿ ವತಿಯಿಂದ ಕನ್ನಡ ಗಂಡುಮಕ್ಕಳ ಶಾಲಾ ಆವರಣದ ಮಹಾತ್ಮಗಾಂಧಿ ಸ್ಮಾರಕದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ ಜಂಗಣ್ಣವರ ವಹಿಸಿ ಮಾತನಾಡಿ, ಜ. 18 ರಂದು ತಾಯಿ ಭುವನೇಶ್ವರಿಯ ರಥಯಾತ್ರೆ ಜಕ್ಕಲಿ ಗ್ರಾಮಕ್ಕೆ ಆಗಮಿಸಲಿದ್ದು, ಜ. 18ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯ ದಾರಿಯುದ್ದಕೂ ಗ್ರಾ.ಪಂ ಕಾರ್ಮಿಕರು ಊರಿನ ಸ್ವಚ್ಛತೆಗೆ ಶ್ರಮವಹಿಸಬೇಕು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಮಹಿಳೆಯರು ಮೆರವಣಿಗೆ ಸಾಗುವ ಮಾರ್ಗದಲ್ಲಿ ರಂಗೋಲಿ ಹಾಕಿ, ಶಾಲಾ ಮಕ್ಕಳಿಂದ ರೂಪಕ, ಪ್ರಭಾತಫೇರಿ ನಡೆಸಬೇಕು. ಕನ್ನಡದ ತಾಯಿ ಭುವನೇಶ್ವರಿಯ ರಥಯಾತ್ರೆಯನ್ನು ಅದ್ದೂರಿಯಿಂದ ಬರಮಾಡಿಕೊಳ್ಳುವಂತೆ ತಿಳಿಸಿದ ಅವರು, ರೈತರು ತಮ್ಮ ಬಂಡಿಗಳನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂದರು.
ತಾ.ಪಂ ಸಿಇಓ ಚಂದ್ರಶೇಖರ ಕಂದಕೂರ ಮಾತನಾಡಿ, ಮೆರವಣಿಗೆ ಸಾಗುವ ರಸ್ತೆಯಲ್ಲಿ ಅಲಂಕಾರ, ಫ್ಲೆಕ್ಸ ಅಳವಡಿಸಿ, ಕನ್ನಡದ ಧ್ವಜಗಳನ್ನು ಮನೆಯ ಮೇಲೆಲ್ಲ ಹಾರಿಸಿ ಮೆರವಣಿಗೆಗೆ ಮೆರಗು ನೀಡಿರಿ ಎಂದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎಸ್.ಎಸ್. ರಿತ್ತಿ ಮಾತನಾಡಿದರು. ಸಭೆಯಲ್ಲಿ ತಾ.ದೈ.ಶಿ. ಅಧಿಕಾರಿ ಆರ್.ಎಸ್. ನರೇಗಲ್ಲ, ಗ್ರಾ.ಪಂ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಆರ್. ಗದಗಿನ, ಗ್ರಾಮದ ಗುರು-ಹಿರಿಯರು, ಯುವಕರು, ಕಸಾಪ ಗ್ರಾಮ ಘಟಕದ ಅಧ್ಯಕ್ಷರು, ಸದಸ್ಯರು, ಎಲ್ಲ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.