ವಿಜಯಸಾಕ್ಷಿ ಸುದ್ದಿ, ಗದಗ : ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಹಾಗೂ ಕೃಷಿ ವಿಜ್ಞಾನ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ದ್ವೈಮಾಸಿಕ ಕಾರ್ಯಾಗಾರವನ್ನು ಎ.ಇ.ಇ.ಸಿಯ ಸಹ ವಿಸ್ತರಣಾ ನಿರ್ದೇಶಕ ಆರ್.ಬಿ. ಬೆಳ್ಳಿ ಉದ್ಘಾಟಿಸಿದರು.
ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್. ತಾರಾಮಣಿ ಮಾತನಾಡಿ, ಜಿಲ್ಲೆಯ ಮಳೆ-ಬೆಳೆ ಪರಿಸ್ಥಿತಿ, ವಾತಾವರಣ, ಬೆಳೆಗಳಿಗೆ ತಗಲುವ ಕೀಟ/ರೋಗ ಬಾಧೆ ಇತ್ಯಾದಿಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಿ ಮಾಹಿತಿ ನೀಡಲಾಗುತ್ತಿದೆ. ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ಸಕಾಲದಲ್ಲಿ ರೈತರಿಗೆ ಪರಿಕರಗಳನ್ನು ಪೂರೈಸುವುದು ಒಟ್ಟಾರೆಯಾಗಿ ರೈತರ ನೆರವಿಗೆ ಇಲಾಖೆ ಸದಾ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿಜ್ಞಾನಿ ಡಾ. ಮೊಟಗಿ ಹೆಸರು, ತೊಗರಿ, ಸೂರ್ಯಕಾಂತಿ, ಮತ್ತಿತರೆ ಬೆಳೆಗಳ ಸುಧಾರಿತ, ರೋಗ/ಕೀಟ ನಿರೋಧಕ ಶಕ್ತಿಯನ್ನು ಹೊಂದಿದ ಹಾಗೂ ನವೀನ ತಳಿಗಳ ಕುರಿತು ಮಾಹಿತಿ ನೀಡಿದರು.
ಒಣ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕೃಷಿ ತಾಂತ್ರಿಕತೆಗಳ ಕುರಿತು ಡಾ ಎಂ.ಪಿ. ಪೋತ್ದಾರ ಹಾಗೂ ಈ ಭಾಗದಲ್ಲಿ ಬೆಳೆದಿರುವ ಬೆಳೆಗೆ ಬರುವ ರೋಗಗಳ ನಿರ್ವಹಣಾ ಕ್ರಮಗಳ ಕುರಿತು ಡಾ. ಶಿವಲಿಂಗಪ್ಪ ಹೋಟಕರ ಚರ್ಚಿಸಿದರು. ಜಿಲ್ಲೆಯ ಬೆಳೆಗಳಲ್ಲಿ ಕಂಡುಬರುವ ಕೀಟಗಳ ನಿರ್ವಹಣೆ ಕುರಿತು ಡಾ. ಸಿ.ಎಂ. ರಫಿ ತಿಳಿಸಿದರು.
ಕೃಷಿ ವಿಜ್ಞಾನಿಗಳಾದ ಡಾ. ಎಸ್.ಎಲ್. ಪಾಟೀಲ, ಡಾ. ಹೇಮಾವತಿ ಹಿರೇಗೌಡರ, ಡಾ. ಎನ್.ಎಚ್. ಬಂಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಸುಧಾ ಮಂಕಣಿ, ಜಿಲ್ಲೆಯ ಉಪ ಕೃಷಿ ನಿರ್ದೇಶಕರು ಗದಗ/ರೋಣ, ಜಂಟಿ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿಗಳು ಮತ್ತು ಎಲ್ಲ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ಆತ್ಮಾ ಸಿಬ್ಬಂದಿ ಹಾಗೂ ಕೃಷಿ ಸಂಜೀವಿನಿ ತಾಂತ್ರಿಕ ಸಹಾಯಕರು ಹಾಜರಿದ್ದರು.