ಬೀದರ್:- ಭೀಕರ ಅಗ್ನಿ ದುರಂತದಲ್ಲಿ ಸುಮಾರು 10 ಅಂಗಡಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಜರುಗಿದೆ.
ಎಸ್, ಪಟ್ಟಣದ ಬಸ್ ನಿಲ್ದಾಣದ ಎದುರಿಗಿರುವ ಗಣೇಶ್ ಮಾರ್ಕೆಟ್‌ನಲ್ಲಿ ತಡರಾತ್ರಿ ಘಟನೆ ಜರುಗಿದ್ದು, ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ.
ಅಗ್ನಿ ಅವಘಡದಲ್ಲಿ 1 ಚಪ್ಪಲಿ ಅಂಗಡಿ, 1 ಕಿರಾಣಿ ಅಂಗಡಿ, 1 ತರಕಾರಿ ಅಂಗಡಿ ಮತ್ತು 7 ಭಾಂಡೆ ಅಂಗಡಿಗಳು ಸೇರಿದಂತೆ ಒಟ್ಟು 10 ಅಂಗಡಿಗಳು ಸಂಪೂರ್ಣ ಭಸ್ಮವಾಗಿದೆ. ಕೂಡಲೇ ಮಾಹಿತಿ ಆಧರಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ದುರದೃಷ್ಟವಶಾತ್ ಅಗ್ನಶಾಮಕದಳ ಸಿಬ್ಬಂದಿ ಬರುವುದು ಕೊಂಚ ತಡವಾದ ಕಾರಣ, ಅಂಗಡಿಗಳು ಸುಟ್ಟು ಕರಕಲಾಗಿವೆ.
ಹಬ್ಬದ ಸೀಸನ್ ಆಗಿದ್ದರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ ವಸ್ತುಗಳನ್ನು ತರಿಸಲಾಗಿತ್ತು. ಅನಿರೀಕ್ಷಿತ ಬೆಂಕಿ ನಮ್ಮ ಬದುಕನ್ನೇ ಬೀದಿಗೆ ತಂದಿದೆ ಎಂದು ಅಂಗಡಿ ಮಾಲೀಕರು ಕಣ್ಣೀರು ಹಾಕಿದ್ದಾರೆ. ಸರ್ಕಾರ ನಮಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ. ಘಟನಾಾ ಸ್ಥಳಕ್ಕೆ ತಹಸೀಲ್ದಾರ್ ಮಹೇಶ ಪಾಟೀಲ ಹಾಗೂ ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.



