ಬೀದರ್: ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು ಮಂಗಳವಾರ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ, ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮತ್ತು ನೊಂದ ಸಂತ್ರಸ್ಥರ ಭೇಟಿ ಮತ್ತು ಸಾಂತ್ವನ ಹಾಗೂ ಸರ್ಕಾರ ಕೈಗೊಂಡಿರುವ ನೆರೆ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸೇರಿದಂತೆ ಮುಖಂಡರು, ಕಾರ್ಯಕರ್ತರೊಂದಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ, ಖಾಶೆಂಪುರ್ ಪಿ, ಬುಧೇರಾ, ಮರ್ಜಾಪೂರ್ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಮಂಗಳವಾರ ಸಂಜೆ ಭೇಟಿ ನೀಡಿದ ಅವರು, ಜಮೀನಿನಲ್ಲಿ ನಿಂತಿರುವ ನೀರಿನಲ್ಲೇ ತೆರಳಿ ಬೆಳೆ ಹಾನಿ ಪರಿಶೀಲನೆ ನಡೆಸಿ, ಅಲ್ಲಿದ್ದ ರೈತರಿಂದ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಖಾಶೆಂಪುರ್ ಪಿ ಗ್ರಾಮದಲ್ಲಿ ಇತ್ತೀಚೆಗೆ ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದ ರೈತ ಮಹಿಳೆಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ವಿವಿಧ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮಳೆ ನೀರಿನಿಂದ ತುಂಬಿರುವುದನ್ನು ಜೆಡಿಎಸ್ ನಾಯಕರು ವೀಕ್ಷಿಸಿದರು. ಈ ನಡುವೆ ಅವರು, ವಿವಿಧ ಗ್ರಾಮಗಳಲ್ಲಿ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮನೆ ಕೆಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಧನ ಸಹಾಯ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಈ ಭಾಗದಲ್ಲಿ ಬೆಳೆಗಳಿಗೆ, ಮನೆಗಳಿಗೆ ಸಾಕಷ್ಟು ಹಾನಿ ಉಂಟಾಗಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಕೂಡಲೇ ಬೆಳೆ ಕಳೆದುಕೊಂಡ ರೈತರ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ನಾನು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಕೇಂದ್ರ ಸರ್ಕಾರದಿಂದ ನೆರವು ಒದಗಿಸಿಕೊಡುವ ನಿಟ್ಟಿನಲ್ಲಿ ಕೂಡ ಪ್ರಯತ್ನಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿರವರು ಹೇಳಿದರು.
ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡಿ, ನಾನು ಕೆಲ ದಿನಗಳ ಹಿಂದೆ ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದೇನೆ. ನಮ್ಮ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಈ ವೇಳೆ ಮಾಜಿ ಸಚಿವರು ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟೇಕರ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಐಲಿಂಜಾನ್ ಮಠಪತಿ, ಅಶೋಕ್ ಕೊಡಗೆ ಶಾಂತಲಿಂಗ ಸಾಳಗಿ, ರಾಜಶೇಖರ ಜವಳೆ, ದೇವೇಂದ್ರ ಸೋನಿ,
ಲಲಿತಾ ಕರಂಜೆ, ಶಿವಪುತ್ರ ಮಾಳಿಗೆ, ಬಸವರಾಜ್ ಪಾಟೀಲ್ ಹಾರೂರಗೇರಿ, ರಾಜು ಚಿಂತಾಮಣಿ, ಸುದರ್ಶನ್ ಸುಂದರರಾಜ್, ಅಭಿ ಕಾಳೆ, ಬೊಮಗೊಂಡ ಚಿಟ್ಟಾವಾಡಿ, ರೇವಣಸಿದ್ದಪ್ಪ ಪಾಟೀಲ್, ಬಸವರಾಜ್ ಶಹಾಪೂರೆ, ಮಲ್ಲಿಕಾರ್ಜುನ ನೆಳಗೆ, ಪ್ರಶಾಂತ್ ವಿಶ್ವಕರ್ಮ, ಸಂಗು ಚಿದ್ರಿ, ಜಾಪೇಡ್ ಕಡ್ಯಾಳ, ತಾನಾಜಿ ತೋರಣೇಕರ್, ಮನೋಹರ್ ದಂಡೆ, ಅರುಣಕುಮಾರ್, ತರುಣ್ ನಾಗಮಾರಪಳ್ಳಿ, ರವಿ ಸಿರ್ಸಿ ಸೇರಿದಂತೆ ಅನೇಕರಿದ್ದರು.



