ಅಮೆರಿಕ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆಯ ಮೇರೆಗೆ ಇರಾನ್ ಬಂದರುಗಳಿಗೆ ದಿಗ್ಬಂಧನ ಹೇರಲಾಗುತ್ತಿದೆ ಎಂದು ಅಮೆರಿಕ ಸೇನೆ ಘೋಷಿಸಿದೆ. ಈ ನಿರ್ಧಾರದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ.
ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ನೀಡಿದ ಮಾಹಿತಿ ಪ್ರಕಾರ, ಈ ನಿರ್ಬಂಧವು ಇರಾನ್‌ನ ಬಂದರುಗಳು, ಕರಾವಳಿ ಪ್ರದೇಶಗಳು ಹಾಗೂ ಅದರ ಸುತ್ತಮುತ್ತ ಸಂಚರಿಸುವ ಎಲ್ಲಾ ದೇಶಗಳ ಹಡಗುಗಳಿಗೆ ಅನ್ವಯವಾಗುತ್ತದೆ.
ಎಕ್ಸ್ (X) ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಏಪ್ರಿಲ್ 13ರಂದು ಬೆಳಗ್ಗೆ 10 ಗಂಟೆಯಿಂದ ಇರಾನ್ ಬಂದರುಗಳಿಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಎಲ್ಲಾ ಹಡಗುಗಳ ಸಂಚಾರವನ್ನು ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದೆ.
ಅರೇಬಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯಲ್ಲಿರುವ ಇರಾನ್ ಬಂದರುಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಎಲ್ಲ ದೇಶಗಳ ಹಡಗುಗಳಿಗೆ ಸಮಾನವಾಗಿ ನಿರ್ಬಂಧ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದೆ. ಆದರೆ, ಹಾರ್ಮುಜ್ ಜಲಸಂಧಿಯಿಂದ ಇರಾನಿನ ಹೊರಗಿನ ಬಂದರುಗಳಿಗೆ ಸಾಗುವ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದಲ್ಲದೆ, ಒಮಾನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಕಾರ್ಯನಿರ್ವಹಿಸುವ ನೌಕಾಪಡೆಯವರು ಮ್ಯಾರಿನರ್‌ಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಬ್ರಿಡ್ಜ್-ಟು-ಬ್ರಿಡ್ಜ್ ಚಾನೆಲ್ 16 ಮೂಲಕ ಅಮೆರಿಕ ನೌಕಾಪಡೆಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.



