ರಾಮನಗರ: ಜಿದ್ದಾಜಿದ್ದಿಯ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಆರಂಭದ ಅಂಚೆ ಮತದಾನದಲ್ಲಿ ಸಿ.ಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಮಬಲ ಕಾಯ್ದುಕೊಂಡಿದ್ದರು. ಆದರೆ ಮೊದಲನೇ ಸುತ್ತಿನ ಮುಕ್ತಾಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರು 61 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾದರೂ ಚನ್ನಪಟ್ಟಣ ಚುನಾವಣೆಯ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಒಮ್ಮೆ ನಿಖಿಲ್, ಮತ್ತೊಮ್ಮೆ ಯೋಗೇಶ್ವರ್ ಮುನ್ನಡೆ ಸಾಧಿಸುತ್ತಿದ್ದಾರೆ. 2ನೇ ಸುತ್ತಿನ ಮತ ಎಣಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು 131 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕರ್ನಾಟಕದ ಮೂರು ಮತ್ತು ಕೇರಳದ ಒಂದು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಮತದಾನ ನಡೆದಿದ್ದು, ಮಹರಾಷ್ಟ್ರ ಮತ್ತು ಜಾರ್ಖಾಂಡ್ನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳತ್ತ ರಾಜ್ಯದ ಚಿತ್ತ ನೆಟ್ಟಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ.



