ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಜೆ.ಟಿ. ಕಾಲೇಜು ಆವರಣದಲ್ಲಿ ಸೆ. 30ರಂದು ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಹುಬ್ಬಳ್ಳಿಯ ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಎಸ್.ಆರ್. ಬೊಮ್ಮಾಯಿ ಟ್ರಸ್ಟ್, ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ ಗದಗ ಹಾಗೂ ಇನ್ಸ್ಪೈರಾ ಟೆಕ್ನಾಲಜೀಸ್ ಸಹಯೋಗದಲ್ಲಿ ಈ ಮೇಳ ನಡೆಯಲಿದೆ.
ಪದವೀಧರ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾರಣಕ್ಕೆ ಪದವೀಧರ ಯುವಕರಿಗೆ ಉದ್ಯೋಗ ದೊರಕಿಸಿಕೊಡುವುದು ನನ್ನ ಜವಾಬ್ದಾರಿ. ಆ ನಿಟ್ಟಿನಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸುವ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಹುಬ್ಬಳ್ಳಿಯಲ್ಲಿ ಉದ್ಯೋಗ ಮಾಹಿತಿ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಂತೆಯೇ ಉತ್ತರಕನ್ನಡ, ಹಾವೇರಿ, ಗದಗ ಮತ್ತು ಧಾರವಾಡದಲ್ಲಿ ಉದ್ಯೋಗ ಮೇಳ ಆಯೋಜಿಸಿ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡಿರುವೆ. ಅದರ ಮುಂದುವರಿದ ಭಾಗವಾಗಿ ಗದಗ ಜಿಲ್ಲೆಯಲ್ಲಿ ಮತ್ತೊಮ್ಮೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಉದ್ಯೋಗ ಮೇಳದಲ್ಲಿ 2500 ಹುದ್ದೆಗಳಿಗಾಗಿ 50ಕ್ಕೂ ಹೆಚ್ಚು ಕಂಪನಿಗಳು ಆಗಮಿಸಲಿವೆ. ಎಸೆಸೆಲ್ಸಿಯಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದವರೂ ಭಾಗವಹಿಸಬಹುದು. ಈಗಾಗಲೇ ಆನ್‌ಲೈನ್ ನೋಂದಣಿ ಮಾಡಿಕೊಳ್ಳಲಾಗಿದೆ. ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಗದಗ ಮಾತ್ರವಲ್ಲದೇ ನೆರೆಯ ಜಿಲ್ಲೆಯ ಯುವಕರು ಇದರಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಸೆ. 30ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಬಾಷ್ ಇಂಡಿಯಾ ಫೌಂಡೇಶನ್‌ನ ಪ್ಲೇಸ್‌ಮೆಂಟ್ ಹೆಡ್ ಕಲೀಮ್ ಎಸ್., ಸುಧೀರ್ ಪಿಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆಎಲ್‌ಇ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಇನ್ಸ್ಪೈರಾ ಟೆಕ್ನಾಲಜಿಯ ಸಂಸ್ಥಾಪಕ ಚಂದ್ರಶೇಖ ಅಣ್ಣಿಗೇರಿ, ಜೆಟಿ ಕಾಲೇಜಿನ ಪ್ರಾಚಾರ್ಯ ಪಿ.ಜಿ. ಪಾಟೀಲ ಉಪಸ್ಥಿತರಿದ್ದರು.
ಈ ಬಾರಿ ಉದ್ಯೋಗ ಮೇಳದಲ್ಲಿ ಯುವಕರಿಗೆ ಸ್ವ ಉದ್ಯೋಗ, ಕೈಗಾರಿಕೆ ಸ್ಥಾಪನೆಗೆ ಅನುಕೂಲ ಆಗುವಂತೆ ಎರಡು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಯಾವ ರೀತಿಯ ಉದ್ಯೋಗಕ್ಕೆ ಪ್ರೋತ್ಸಾಹ, ಪೂರಕ ವಾತಾವರಣವಿದೆ ಎನ್ನುವ ಕುರಿತು ಸಿಡಾಕ್ ಹಾಗೂ ಜಿಲ್ಲಾ ಕೈಗಾರಿಕೆ ತರಬೇತಿ ಕೇಂದ್ರದ ಮುಖ್ಯಸ್ಥರು ಉಪನ್ಯಾಸ ನೀಡಲಿದ್ದಾರೆ ಎಂದು ಎಸ್.ವಿ. ಸಂಕನೂರು ಮಾಹಿತಿ ನೀಡಿದರು.



