ನವದೆಹಲಿ: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಸುಪ್ರೀಂ ಕೋರ್ಟ್ ಇಂದು ಮಾನ್ಯಗೊಳಿಸಿದೆ. ಈ ಮೂಲಕ ಕಾಂಗ್ರೆಸ್ ಶಾಸಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.
ನಂಜೇಗೌಡ ಶಾಸಕ ಸ್ಥಾನವನ್ನು ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಅವರಿದ್ದ ಪೀಠ, ನಂಜೇಗೌಡ ಅವರ ಆಯ್ಕೆಯನ್ನು ಎತ್ತಿ ಹಿಡಿದಿದೆ.
ಇದರೊಂದಿಗೆ ಕರ್ನಾಟಕ ಹೈಕೋರ್ಟ್ 2025ರ ಸೆಪ್ಟೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ವಿಚಾರಣೆಯ ವೇಳೆ ಪೀಠವು ಎಲ್ಲರ ಸಮ್ಮುಖದಲ್ಲಿ ಮುಚ್ಚಿದ ಲಕೋಟೆಯನ್ನು ತೆರೆಯಿತು. ಮರು ಮತ ಎಣಿಕೆಯಲ್ಲಿಯೂ ನಂಜೇಗೌಡ ಅವರು ತಮ್ಮ ಎದುರಾಳಿ ಬಿಜೆಪಿಯ ಕೆ.ಎಸ್. ಮಂಜುನಾಥ್ ಗೌಡ ಅವರಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂಬುದು ದೃಢಪಟ್ಟಿತು. ನಂಜೇಗೌಡರು 50,957 ಮತಗಳನ್ನು ಗಳಿಸಿದ್ದರೆ, ಮಂಜುನಾಥ್ ಗೌಡರು 50,707 ಮತಗಳನ್ನು ಪಡೆದಿದ್ದರು.
ಅಂದರೆ, ನಂಜೇಗೌಡರು 250ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ಪೀಠ ಗಮನಿಸಿತು. ಹೈಕೋರ್ಟ್ ನೀಡಿದ್ದ ಮರು ಮತ ಎಣಿಕೆ ನಿರ್ದೇಶನದ ನಂತರವೂ ಮಾಲೂರು ಕ್ಷೇತ್ರದ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ವಾದ ಮಂಡಿಸಿದ್ದರು.
ಈ ಪ್ರಕರಣದ ಹಿನ್ನೆಲೆ ನೋಡಿದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಕೆ.ವೈ. ನಂಜೇಗೌಡ ಅವರು ಗೆಲುವು ಸಾಧಿಸಿದ್ದರು. ಆದರೆ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ 15 ಅಭ್ಯರ್ಥಿಗಳ ಏಜೆಂಟ್‌ಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಲಾಗಿಲ್ಲ. ಒಂದೇ ಕೊಠಡಿಯಲ್ಲಿ ಮತ ಎಣಿಕೆ ನಡೆಯಬೇಕಿದ್ದರೂ, ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಎಣಿಕೆ ನಡೆಸಲಾಗಿದೆ. ಇದರಿಂದ ಜನಪ್ರತಿನಿಧಿಗಳ ಕಾಯ್ದೆ ಹಾಗೂ ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಮಂಜುನಾಥ್ ಅವರು ಆರೋಪಿಸಿದ್ದರು. ಚುನಾವಣಾ ಆಯೋಗ ನಂಜೇಗೌಡರನ್ನು ವಿಜೇತ ಎಂದು ಘೋಷಿಸಿದ ಕ್ರಮವನ್ನು ರದ್ದುಪಡಿಸಿ ಮರು ಮತ ಎಣಿಕೆ ನಡೆಸಬೇಕು ಎಂದು ಅವರು ಕೋರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮಗಳಿವೆ ಎಂದು ಹೇಳಿತ್ತು. ಫಾರ್ಮ್–17C ಭಾಗ–2 ದಾಖಲೆಗಳಲ್ಲಿ ಎಣಿಕೆ ಏಜೆಂಟ್‌ಗಳ ಸಹಿಗಳು ಇಲ್ಲದಿರುವುದು, ಕೆಲ ದಾಖಲೆಗಳಲ್ಲಿ ಅನಧಿಕೃತ ವ್ಯಕ್ತಿಗಳ ಸಹಿಗಳು ಕಂಡುಬಂದಿರುವುದು ಹಾಗೂ ಸ್ಟ್ರಾಂಗ್ ರೂಂ ದಾಖಲೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಹೈಕೋರ್ಟ್ ಗಮನಿಸಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ವಾರಗಳಲ್ಲಿ ಮರು ಮತ ಎಣಿಕೆ ನಡೆಸುವಂತೆ ಆದೇಶಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ನಂಜೇಗೌಡರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದು, ಮರು ಮತ ಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಇದೀಗ ಆ ಫಲಿತಾಂಶದ ಆಧಾರದಲ್ಲಿ ಸುಪ್ರೀಂ ಕೋರ್ಟ್ ನಂಜೇಗೌಡ ಅವರ ಆಯ್ಕೆಯನ್ನು ಮಾನ್ಯಗೊಳಿಸಿದೆ.



