‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಮಡೆನೂರು ಮನು ಇತ್ತೀಚೆಗೆ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಸಹ ನಟಿಯ ಮೇಲೆ ಅತ್ಯಾಚಾರ, ಖ್ಯಾತ ನಟರ ಕುರಿತು ಮನು ಅವರದ್ದು ಎನ್ನಲಾದ ಆಡಿಯೋ ಸೇರಿದಂತೆ ಹಲವು ಆರೋಪಗಳು ಮಡೆನೂರು ಮನು ವಿರುದ್ಧ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮನು ಅವರನ್ನು ಚಿತ್ರರಂಗಿದಿಂದ ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಮನುಗೆ ಬಿಗ್ ರಿಲೀಫ್ ಸಿಕ್ಕಿದ್ದು, ಮನು ಮೇಲೆ ಹೇರಿದ್ದ ನಿಷೇಧವನ್ನು ತೆರೆವುಗೊಳಿಸಲು ತೀರ್ಮಾನಿಸಲಾಗಿದೆ.
ನಟರಾದ ದರ್ಶನ್, ಶಿವರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಬಗ್ಗೆ ಮಡೆನೂರು ಮನು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಇದರಿಂದ ಅವರ ಅಭಿಮಾನಿಗಳು ಮನು ವಿರುದ್ಧ ಗರಂ ಆಗಿದ್ದರು. ಆಡಿಯೋ ವೈರಲ್ ಆದ ಬೆನ್ನಲೇ 100ಕ್ಕೂ ಅಧಿಕ ಕೇಸ್ಗಳು ಮನು ಮೇಲೆ ದಾಖಲಿಸಲಾಗಿತ್ತು. ಚಿತ್ರರಂಗದಿಂದ ಮನು ಅವರನ್ನು ಬ್ಯಾನ್ ಮಾಡಬೇಕು ಎಂದು ಶಿವರಾಜ್ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಅಭಿಮಾನಿಗಳು ಒತ್ತಾಯಿಸಿದ್ದರು. ಆ ಬಳಿಕ ಈ ಮೂವರೂ ಸ್ಟಾರ್ ಕಲಾವಿದರ ಬಳಿ ಕ್ಷಮೆ ಕೇಳಲು ಮಡೆನೂರು ಮನು ಮುಂದಾದರು. ಅಲ್ಲದೆ ಧ್ರುವ ಸರ್ಜಾ ಬಳಿಕ ದೂರವಾಣಿ ಕರೆ ಮಾಡಿ ಮಾತನಾಡಿ ಕ್ಷಮೆ ಕೇಳಿದ್ದರು.
ಶಿವರಾಜ್ಕುಮಾರ್ ಮನೆ ಮುಂದೆ ಕ್ಷಮೆ ಕೇಳಲು ಕಾದಿದ್ದರು. ಆದರೆ ಶಿವಣ್ಣನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದೀಗ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಮನು ಭೇಟಿ ಆಗಿದ್ದು, ಮೂವರೂ ನಟರಿಗೆ ಕ್ಷಮೆ ಕೋರಿ ಮನು ಪತ್ರ ಬರೆದಿದ್ದಾರೆ.
ಮಡೆನೂರು ಮನು ಕ್ಷಮೆ ಕೇಳಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಅವಕಾಶ ನೀಡುವುದಾಗಿ ಉಮೇಶ್ ಬಣಕಾರ್ ಹೇಳಿದ್ದಾರೆ. ‘ಮನು ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಪ್ರಾಯಶ್ಚಿತ್ತ, ಪಾಪಪ್ರಜ್ಞೆ ಅವರಿಗೆ ಕಾಡಿದೆ. ಈ ಕ್ಷಮಾಪಣೆಯ ಕಾಗದ ನೀಡಿದ್ದಾರೆ. ಬಹಿರಂಗವಾಗಿ ಅವರು ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿದ್ದಾರೆ. ಅದನ್ನು ಪುರಸ್ಕರಿಸುತ್ತೇವೆ’ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.
‘ಮುಂದೆ ಈ ರೀತಿ ವಿವಾದ ಆಗದಂತೆ ನೋಡಿಕೊಳ್ಳಿ. ಹಿರಿಯರು ಚಿತ್ರರಂಗವನ್ನು ಕಟ್ಟಿ ಬೆಳೆಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ. ನೀವು ಇನ್ನೂ ಉದಯೋನ್ಮುಖರು. ನಿಮಗೆ ಒಂದು ಭವಿಷ್ಯ ಇದೆ. ಮತ್ತೆ ತಪ್ಪು ನಡೆದರೆ ಯಾರೂ ನಿಮ್ಮನ್ನು ಕ್ಷಮಿಸಲ್ಲ’ ಎಂದು ಮಡೆನೂರು ಮನುಗೆ ಉಮೇಶ್ ಬಣಕಾರ್ ಬುದ್ಧಿ ಹೇಳಿ ಕಳುಹಿಸಿದ್ದಾರೆ.