ನವದೆಹಲಿ: ಬಳ್ಳಾರಿ ಜಿಲ್ಲಾ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆರವು ಮಾಡಿ ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಜನಾರ್ದನರೆಡ್ಡಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಿಂದ ಆದೇಶ ಪ್ರಕಟವಾಗಿದ್ದು, ಯಾವುದೇ ಪೂರ್ವಾನುಮತಿ ಇಲ್ಲದೇ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಈ ಹಿಂದೆ ಬಳ್ಳಾರಿ, ಕಡಪ, ಅನಂತಪುರಕ್ಕೆ ತೆರಳಲು ಅವರು ಪೂರ್ವಾನುವತಿ ಪಡೆಯುವುದು ಕಡ್ಡಾಯವಾಗಿತ್ತು. ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಷರತ್ತು ವಿಧಿಸಿತ್ತು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲುಪಾಲಾಗಿದ್ದರು. ನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
2015 ರ ಜನವರಿ 23 ರಂದು ಸುಪ್ರೀಂ ಕೋರ್ಟ್ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆ ಸಂದರ್ಭದಲ್ಲಿ, ಬಳ್ಳಾರಿ, ಕಡಪ, ಅನಂತಪುರಕ್ಕೆ ತೆರಳಲು ಪೂರ್ವಾನುಮತಿ ಪಡೆಯವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿತ್ತು. ಪೂರ್ವಾನುಮತಿ ಪಡೆದು ಈಗಾಗಲೇ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಿದ್ದಾರೆ. ಆದರೆ, ಇನ್ಮುಂದೆ ಮುಕ್ತವಾಗಿ ಬಳ್ಳಾರಿಗೆ ತೆರಳಬಹುದಾಗಿದೆ.