ಗೋಲ್ಡ್ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಎದುರಾಗಿದ್ದು, ಇಂದು ಚಿನ್ನದ ದರ ಮತ್ತಷ್ಟು ದುಬಾರಿ ಆಗಿದೆ.
ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಬಂಗಾರದ ಬೆಲೆಯಲ್ಲಿ ಆಲ್ ಟೈಮ್ ರೆಕಾರ್ಡ್ ನಿರ್ಮಾಣವಾಗ್ತಿದೆ. ಕಳೆದ ಒಂದು ವರ್ಷದಲ್ಲಿ 65% ರಷ್ಟು ದರ ಏರಿಕೆ ಆಗಿದ್ದರೂ ಸಹ ಚಿನ್ನದ ಮೇಲೆ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಇನ್ನು ಬೆಳ್ಳಿ ಒಂದು ವರ್ಷದಲ್ಲಿ 75% ಏರಿಕೆಯಾಗಿದೆ.
ಹಿಂದಿನ ಯಾವ ವರ್ಷಗಳಲ್ಲೂ ಆಗದ ಬೆಲೆ ಏರಿಕೆ ಈ ವರ್ಷ ಅಕ್ಟೋಬರ್‌ನಲ್ಲಿ ಆಗಿದೆ. ದೀಪಾವಳಿ ಹಾಗೂ ಈಗಾಗಲೇ ಮದುವೆ ಸೀಜನ್ ಆರಂಭವಾಗಿದ್ದು, ಮಧ್ಯಮ ವರ್ಗ ಹಾಗೂ ಬಡವರ್ಗದ ಮಹಿಳೆಯರಿಗೆ ಬಂಗಾರ ಕೊಳ್ಳಂಗಿಲ್ಲ, ಮುಟ್ಟಂಗಿಲ್ಲ ಎನ್ನುವಂತಾಗಿದೆ.
ಇನ್ನೂ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,24,000 ರೂ. ಆಗಿದ್ರು, ಬೆಳ್ಳಿ ಕೆ.ಜಿಗೆ 1,60,000 ರೂ. ಆಗಿದೆ. ಪ್ರಮುಖವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿರೋದು, ವಿವಿಧ ದೇಶದ ಬ್ಯಾಂಕ್‌ಗಳು ಚಿನ್ನ ಕೊಳ್ಳುತ್ತಿರೋದು, ಟ್ರಂಪ್‌ನ ಟಾರಿಫ್ ನೀತಿ ಮೊದಲಾದ ಕಾರಣಗಳಿಂದ ಚಿನ್ನ, ಬೆಳ್ಳಿ ಏರಿಕೆಯಾಗ್ತಿದೆ.
ಇನ್ನೂ ಎರಡ್ಮೂರು ತಿಂಗಳು ಇದೇ ದರ ಇರಲಿದ್ದು, 10 ಗ್ರಾಂ ಚಿನ್ನದ ಬೆಲೆ 1,35,000 ರೂ. ಹಾಗೂ ಬೆಳ್ಳಿ ಕೆ.ಜಿಗೆ 1,75,000 ರೂ.ವರೆಗೆ ಹೆಚ್ಚಳವಾಗೋ ಸಾಧ್ಯತೆಯಿದೆ. ಇನ್ನೂ ಒಂದೆರಡು ತಿಂಗಳಲ್ಲಿ ಕೇವಲ 10ರಿಂದ 15% ಮಾತ್ರ ಇಳಿಕೆಯಾಗೋ ನಿರೀಕ್ಷೆಯಿದೆ. ಹೆಚ್ಚಿನ ಇಳಿಕೆಯನ್ನು ನಿರೀಕ್ಷಿಸಲಾಗ್ತಿಲ್ಲ. ಹೀಗಾಗಿ ಶಾಸ್ತ್ರಕ್ಕಾಗಿ ಚಿನ್ನ ಖರೀದಿಸಿ, ಯಾವುದೇ ಕಾರಣಕ್ಕೂ ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ ಎಂದು ಹಣಕಾಸು ತಜ್ಞರು ಹೇಳುತ್ತಿದ್ದಾರೆ.



