ಮೈಸೂರು:- ಹೆಂಡ್ತಿ ಕೊಂದ ಆರೋಪದಲ್ಲಿ ಜೈಲು ಪಾಲಾಗಿದ್ದ ಗಂಡನಿಗೆ ಬಿಗ್ ಶಾಕ್ ಎದುರಾಗಿದ್ದು, 5 ವರ್ಷದ ಹಿಂದೆ ಸತ್ತವಳು ದಿಢೀರ್ ಪ್ರತ್ಯಕ್ಷವಾಗಿರುವ ವಿಚಿತ್ರ ಘಟನೆ ಮೈಸೂರಿನಲ್ಲಿ ಜರುಗಿದೆ.
2021 ರಲ್ಲಿ ಮನೆಯಲ್ಲಿದ್ದ ಹೆಂಡ್ತಿ ಮಲ್ಲಿಗೆ ಎಂಬಾಕೆ ದಿಢೀರ್ ನಾಪತ್ತೆಯಾಗಿದ್ದಳು. ಇದರಿಂದ ಶಾಕ್ ಆಗಿದ್ದ ಗಂಡ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ. ಆದ್ರೆ, ದೂರು ಕೊಟ್ಟವನೇ ಕೊಲೆಗಾರ ಪಟ್ಟ ಕಟ್ಕೊಂಡು 2 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದವನಿಗೆ ಈಗ ನಾಪತ್ತೆಯಾಗಿದ್ದ ಮಲ್ಲಿಗೆ ಕಾಣಿಸಿಕೊಂಡಿದ್ದಾಳೆ.
2021ರಲ್ಲಿ ಪತಿ ಸುರೇಶ್ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಹೆಂಡತಿ ನಾಪತ್ತೆಯಾಗಿದ್ದಾಳೆ ಅಂತ ದೂರು ದಾಖಲಿಸಿದ್ದ. ದೂರು ಕೊಟ್ಟ ಸ್ವಲ್ಪ ದಿನಗಳಲ್ಲೇ ಒಂದು ಶವ ಸಿಗುತ್ತೆ. ಬಳಿಕ ಪೊಲೀಸರು ನೀನೇ ನಿನ್ನ ಹೆಂಡತಿಯನ್ನ ಕೊಲೆ ಮಾಡಿದ್ದೀಯಾ ಎಂದು ಆತನನ್ನ ಜೈಲಿಗೆ ಕಳಿಹಿಸುತ್ತಾರೆ. ನಂತರ ಕೋರ್ಟ್ ಅನುಮತಿಯಂತೆ ಮಲ್ಲಿಗೆ ತಾಯಿ ಗೌರಿ ಅನುಮತಿ ಪಡೆದು ಡೆಡ್ಬಾಡಿನ ಪರೀಕ್ಷೆ ಮಾಡಿಸಿ ಸುರೇಶ್ ಕೈಯಲ್ಲೇ ಅಂತ್ಯಸಂಸ್ಕಾರ ಕೂಡ ಮಾಡಿಸುತ್ತಾರೆ. ಆದ್ರೆ, ಶವಸಂಸ್ಕಾರ ಮಾಡಿದ ಅಸ್ಥಿಪಂಜರ ಮತ್ತು ಹೆಂಡತಿ ಮಲ್ಲಿಗೆ ತಾಯಿಯ ಗೌರಿಯ ಡಿಎನ್ಎ ಪರೀಕ್ಷೆ ವರದಿ ಸರಿ ಬಂದಿರ್ಲಿಲ್ಲ. ಹೀಗಾಗಿ ಹೆಂಡತಿ ಸತ್ತಿಲ್ಲ ಬದುಕಿದ್ದಾಳೆ ಎಂದು ಕೋರ್ಟ್ ಎರಡು ವರ್ಷಗಳ ನಂತ್ರ ಗಿರೀಶ್ ಬೇಲ್ ಕೊಟ್ಟು ಜೈಲಿನಿಂದ ಬಿಡುಗಡೆ ಮಾಡುತ್ತೆ.
ಅಷ್ಟಕ್ಕೂ 2021ರಲ್ಲಿ ಪರಸಂಗದ ಪಲ್ಲಕ್ಕಿ ಏರಿದ್ದ ಮಲ್ಲಿಗೆ ಓಡಿಹೋಗಿ ಮತ್ತೊಬ್ಬನ ಜೊತೆ ಮದುವೆಯಾಗಿರ್ತಾಳೆ. ಆದ್ರೆ, ಕಳೆದ ಸೋಮವಾರ ಮಡಿಕೇರಿ ಹೋಟೆಲ್ನಲ್ಲಿ ಊಟ ಮಾಡ್ತಿದ್ದ ವೇಳೆ ಸುರೇಶ್ ಸ್ನೇಹಿತರು ಆಕೆ ಫೋಟೋ ತೆಗೆದು ಸುರೇಶ್ಗೆ ಕಳಿಸಿದ್ದಾರೆ. ಬಳಿಕ ಶಾಕ್ ಆದ ಸುರೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆಕೆಯನ್ನ ಮೈಸೂರು ಕೋರ್ಟ್ಗೆ ಹಾಜರು ಪಡಿಸಲಾಗಿದೆ.
ಸುರೇಶ್ ಪರ ವಕೀಲರು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ದಾರಿ ತಪ್ಪಿಸಿದ್ದಾರೆ. ಹಾಗಾದ್ರೆ, ಆ ಡೆಡ್ಬಾಡಿ ಯಾರದ್ದು? ಇದಕ್ಕೆಲ್ಲ ಉತ್ತರ ಸಿಗ್ಬೇಕು? ಎಂದು ಆಗ್ರಹಿಸಿದ್ದಾರೆ.
ಇದೀಗ ಕೋರ್ಟ್ ಮೈಸೂರು ಎಸ್ಪಿ ವಿಷ್ಣುವರ್ಧನ್ಗೆ ವರದಿ ಕೊಡುವಂತೆ ಸೂಚಿಸಿದೆ.