ಬೆಂಗಳೂರು:- ಕಳೆದ ವರ್ಷವಷ್ಟೇ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ಬೆನ್ನಲ್ಲೇ, ಇದೀಗ ಮತ್ತೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ ನೀಡಿದೆ.
ಟಿಕೆಟ್ ದರ ಹೆಚ್ಚಳ ಕುರಿತಂತೆ ಕಳೆದ ಒಂದು ವಾರದಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ನಾಳೆಯಿಂದ ದರ ಏರಿಕೆ ಜಾರಿಯಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಟೀಕೆಗೆ ಒಳಗಾಗಿರುವ ಬೆಂಗಳೂರು ಮೆಟ್ರೋ, ಮತ್ತೊಮ್ಮೆ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ದರ ಏರಿಕೆ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ #BoycottMetro ಅಭಿಯಾನ ನಡೆದರೂ, BMRCL ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ BMRCL ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್, ಕೇಂದ್ರ ಸರ್ಕಾರದಿಂದ ದರ ಏರಿಕೆ ತಡೆಗೆ ಸಂಬಂಧಿಸಿದ ಯಾವುದೇ ಅಧಿಸೂಚನೆ ಬಂದಿಲ್ಲ. ಹೀಗಾಗಿ ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಒಂದು ವೇಳೆ ಕೇಂದ್ರ ಸರ್ಕಾರದಿಂದ ಕೊನೆಯ ಕ್ಷಣದಲ್ಲಿ ಆದೇಶ ಬಂದರೆ ಮಾತ್ರ ದರ ಏರಿಕೆ ತಾತ್ಕಾಲಿಕವಾಗಿ ನಿಲ್ಲಬಹುದು ಎಂದು ತಿಳಿಸಿದ್ದಾರೆ. ಆದರೆ ದರ ಏರಿಕೆ ತಡೆದರೂ ಅದು ಶಾಶ್ವತವಾಗಿರುವುದಿಲ್ಲ. ಇದೇ ವರ್ಷದ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಮತ್ತೆ ದರ ಹೆಚ್ಚಳವಾಗುವುದು ಖಚಿತ ಎನ್ನಲಾಗಿದೆ.
ಇನ್ನು, ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ.101.5ರಷ್ಟು ಹೆಚ್ಚಿಸಲಾಗಿತ್ತು. ಪ್ರಯಾಣಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ನಂತರ ದರವನ್ನು ಶೇ.71.5ಕ್ಕೆ ಇಳಿಸಲಾಗಿತ್ತು. ಇದೀಗ ಮತ್ತೆ ಶೇ.5ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು BMRCL ಅಧಿಕೃತವಾಗಿ ಮಾಹಿತಿ ನೀಡಿದೆ.
ಪರಿಷ್ಕೃತ ದರಗಳಂತೆ, 0 ರಿಂದ 2 ಕಿಲೋಮೀಟರ್ ಪ್ರಯಾಣಕ್ಕೆ ಟಿಕೆಟ್ ದರ ₹10ರಿಂದ ₹11ಕ್ಕೆ ಏರಿಕೆಯಾಗಿದ್ದು, 25 ಕಿಲೋಮೀಟರ್ಗಿಂತ ಹೆಚ್ಚು ದೂರ ಪ್ರಯಾಣಕ್ಕೆ ಟಿಕೆಟ್ ದರ ₹90ರಿಂದ ₹95ಕ್ಕೆ ಹೆಚ್ಚಳವಾಗಿದೆ. ಮೆಜೆಸ್ಟಿಕ್–ವೈಟ್ಫೀಲ್ಡ್, ಮೆಜೆಸ್ಟಿಕ್–ಬೊಮ್ಮಸಂದ್ರ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ₹4ರಿಂದ ₹5ರ ವರೆಗೆ ದರ ಏರಿಕೆ ಕಂಡುಬಂದಿದೆ.



