ರಾಮನಗರ:- ಟೋಲ್ ಕಟ್ಟದೇ ಎಸ್ಕೇಪ್ ಆಗುತ್ತಿದ್ದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ಕೊಟ್ಟಿದೆ.
ಹೌದು, ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳು ಟೋಲ್ ಪಾವತಿಸದೇ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುತ್ತಿದ್ದವು. ಇದರಿಂದ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ, ಬಿಡದಿ ಬಳಿಯ ನಿರ್ಗಮನ ರಸ್ತೆ ಬಂದ್ ಮಾಡಿದೆ. ಈ ಮೂಲಕ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಇದ್ದ ಸಂಪರ್ಕವನ್ನು ಕಡಿತಗೊಳಿಸಿದೆ.
ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ವಾಹನ ಸವಾರರು ಬಿಡದಿಯಿಂದ ಮುಂದೆ ಸರ್ವೀಸ್ ರಸ್ತೆಗೆ ಇಳಿದು ಟೋಲ್ ತಪ್ಪಿಸಿಕೊಳ್ಳುತ್ತಿದ್ದರು. ಎಕ್ಸ್ಪ್ರೆಸ್ವೇನಲ್ಲಿ ಸಂಚರಿಸಿ ಶೇಷಗಿರಿಹಳ್ಳಿ ಬಳಿ ಟೋಲ್ ಕಟ್ಟದೇ ಸರ್ವೀಸ್ ರಸ್ತೆ ಮೂಲಕ ಬೆಂಗಳೂರು ತಲುಪುತ್ತಿದ್ದರು. ಹೀಗಾಗಿ ಟೋಲ್ ತಪ್ಪಿಸುವ ವಾಹನಗಳಿಗೆ ಕಡಿವಾಣ ಹಾಕಲು ಹೆದ್ದಾರಿ ಪ್ರಾಧಿಕಾರ ಎಂಟ್ರಿಗೆ ಅವಕಾಶ ಕೊಟ್ಟು, ಎಕ್ಸಿಟ್ ರಸ್ತೆಯನ್ನು ಬಂದ್ ಮಾಡಿದೆ. ಹೀಗಾಗಿ ಬೆಂಗಳೂರಿಗೆ ಬರುವ ವಾಹನ ಸವಾರರು ಶೇಷಗಿರಿಹಳ್ಳಿ ಟೋಲ್ ಪಾವತಿಸಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಇನ್ನು ರಾಷ್ಟ್ರೀಯ ಹೆದ್ದಾರಿಯ ಕ್ರಮಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಚನಾ ಫಲಕವನ್ನೂ ಅಳವಡಿಸದೇ ಏಕಾಏಕಿ ಎಕ್ಸಿಟ್ ರಸ್ತೆಯನ್ನು ಬಂದ್ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.