ಅಕ್ರಮ ಚಿನ್ನಾ ಸಾಗಣೆ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಗೆ ಬಿಗ್ ಶಾಕ್ ಎದುರಾಗಿದೆ. ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ರನ್ಯಾ ಜೊತೆಗೆ ಪ್ರಕರಣದ ಎ2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿಯೂ ವಜಾ ಆಗಿದೆ.
ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠದಿಂದ ಆದೇಶ ಹೊರಡಿಸಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಜೈಲು ಸೇರಿದ್ದ ನಟಿ ರನ್ಯಾ ರಾವ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ ರನ್ಯಾ ವಿರುದ್ಧ ಕಾಫಿಪೊಸಾ ಹೊರಡಿಸಿದ್ದು, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗ್ರಹದಲ್ಲಿಯೇ ಬಂಧನದಲ್ಲಿ ಇಡುವಂತೆ ಆದೇಶಿಸಿದೆ.
ವಿದೇಶಿ ವಿನಿಮಯ ಮತ್ತು ಕಳ್ಳಸಾಗಣೆ ತಡೆ ಕಾಯ್ದೆಯನ್ನು ಕಾಫಿಪೊಸಾ ಎನ್ನಲಾಗುತ್ತದೆ. ಈ ಕಾಯ್ದೆಯ ಸೆಕ್ಷನ್ 3 (1) ರ ಅಡಿಯಲ್ಲಿ ನಟಿ ರನ್ಯಾ ರಾವ್ ವಿರುದ್ಧ ಬಂಧನದ ಆದೇಶವನ್ನು ಹೊರಡಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಬಂಧನದ ಆದೇಶ ಹೊರಡಿಸಿದಲ್ಲಿ ಆರೋಪಿಗೆ 3 ತಿಂಗಳಿಂದ ಒಂದು ವರ್ಷದ ವರೆಗೆ ಬಂಧನ ವಿಧಿಸಬಹುದಾಗಿರುತ್ತದೆ. ಜೊತೆಗೆ ಒಂದು ವರ್ಷದ ಕಾಲ ಜಾಮೀನು ಸಿಗುವುದಿಲ್ಲ. ಪ್ರಕರಣ ಗಂಭೀರವಾಗಿದ್ದರೆ ಎರಡು ವರ್ಷಗಳ ಕಾಲ ಬಂಧನ ವಿಸ್ತರಣೆ ಸಾಧ್ಯವಿದೆ. ಈ ಪ್ರಕರಣದಲ್ಲಿ ಜಾಮೀನು ದೊರಕುವುದು ಬಹುತೇಕ ಕಷ್ಟ.
ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 3ರಂದು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ನಡೆದಂತೆ ರನ್ಯಾ ರಾವ್ ಸುಮಾರು 49.6 ಕೆಜಿ ಅಕ್ರಮ ಚಿನ್ನ ಸಾಗಾಣೆ ಮಾಡಿರುವುದು ಪತ್ತೆಯಾಗಿತ್ತು. ನಟಿ ರನ್ಯಾ ರಾವ್ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದ್ದ ಜಾಮೀನು ಆದೇಶವನ್ನು ಕಾಯ್ದಿರಿಸಲಾಗಿದೆ. ಇದರ ನಡುವೆ ಇದೀಗ ಅವರ ಮೇಲೆ ಕಾಫಿಪೋಸಾ ಕಾಯ್ದೆ ಹೇರಲಾಗಿದೆ. ಇನ್ನೂ ಒಂದು ವರ್ಷ ನಟಿಗೆ ಜೈಲೇ ಗತಿ ಎನ್ನಲಾಗುತ್ತಿದೆ.