ಕನ್ನಡದ ರಂಗಭೂಮಿ ಹಾಗೂ ಚಿತ್ರರಂಗಕ್ಕೆ ಒಂದು ದೊಡ್ಡ ಆಘಾತ ಎದುರಾಗಿದೆ. ಕನ್ನಡ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಲೋಕದಲ್ಲಿ ವಿಶಿಷ್ಟ ಹೆಸರು ಮಾಡಿದ್ದ ಕಲಾವಿದ ಯಶವಂತ ಸರದೇಶಪಾಂಡೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದಿದ್ದ ಯಶವಂತ ಸರದೇಶಪಾಂಡೆ ನಿಧನ ಹಲವರಿಗೆ ಶಾಕ್ ನೀಡಿದೆ.
ಯಶವಂತ ಸರದೇಶಪಾಂಡೆ ಅವರಿಗೆ 60 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತ ಉಂಟಾಗಿದ್ದು ತಕ್ಷಣವೇ ಅವರನ್ನು ಫೋರ್ಟಿಸ್ ಆಸ್ಪತ್ರೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಉಂಟಾಗಿಲ್ಲ. ಅಷ್ಟರಲ್ಲಾಗಲೇ ಅವರು ನಿಧನರಾಗಿದ್ದರು.
ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಖ್ಯಾತ ಕನ್ನಡ ರಂಗಭೂಮಿ ನಟ, ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಅತ್ಯಂತ ಜನಪ್ರೀಯ ನಾಟಕಕಾರರಾಗಿದ್ದ ನಮ್ಮ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಇವರು ಪಾತ್ರವಹಿಸುತ್ತಿದ್ದರು’ ಎಂದು ಅವರು ಬರೆದುಕೊಂಡಿದ್ದಾರೆ.
ಯಶವಂತ ಸರದೇಶಪಾಂಡೆ ಅವರ ಪತ್ನಿ ಮಾಲತಿ ಕೂಡ ಖ್ಯಾತ ಕಿರುತೆರೆ ನಟಿಯಾಗಿದ್ದಾರೆ. ಕನ್ನಡದ ರಿಯಾಲಿಟಿ ಶೋ ಜೋಡಿ ನಂ.1ನಲ್ಲಿ ಭಾಗವಹಿಸಿದ್ದರು. ಪತ್ನಿ ನಟಿ ಮಾಲತಿ, ಮಗಳನ್ನು ಅಗಲಿದ್ದಾರೆ.
ಯಶವಂತ ಸರದೇಶಪಾಂಡೆಯವರು 1965ರ ಜೂನ್ 13ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ. ಚಿಕ್ಕಂದಿನಿಂದಲೇ ನಾಟಕಗಳಲ್ಲಿ ಆಸಕ್ತಿ ಹೊಂದಿದ ಅವರು, ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮ ಪಡೆದರು. ನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆ ವಿಷಯದಲ್ಲಿ ವಿಶೇಷ ತರಬೇತಿ ಪಡೆದುಕೊಂಡಿದ್ದರು.
ವರು ರಾಜ್ಯಾದ್ಯಂತ 60ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಂಧಯುಗ, ಇನ್‌ಸ್ಪೆಕ್ಟರ್ ಜನರಲ್, ಮಿಡ್‌ಸಮರ್ ನೈಟ್ಸ್ ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದರು. ರಂಗವರ್ತುಲ ಮತ್ತು ಬೇಂದ್ರೆ ರಂಗಾವಳಿಯ ಮುಖಾಂತರ ಕವಿ ಬೇಂದ್ರೆಯವರ ಎಲ್ಲಾ ನಾಟಕಗಳನ್ನು ರಂಗಕ್ಕೆ ತಂದು ಅಭೂತಪೂರ್ವ ಯಶಸ್ಸು ಪಡೆದಿದ್ದರು.