ವಾಷಿಂಗ್ಟನ್:- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನರಿಗೆ ಮತ್ತೊಂದು ಆಘಾತ ಕೊಟ್ಟಿದ್ದಾರೆ.
ಟ್ರಂಪ್ ಅವರು, ವಿದೇಶಿ ನಿರ್ಮಿತ ವಾಹನಗಳ ಮೇಲೆ ಭಾರಿ ತೆರಿಗೆ ವಿಧಿಸುವ ಘೋಷಣೆ ಮಾಡಿದ್ದಾರೆ. ವೈಟ್ ಹೌಸ್ ಪ್ರಕಾರ, ಟ್ರಂಪ್ ಈ ವಾಹನಗಳ ಮೇಲೆ 25 ಪ್ರತಿಶತ ತೆರಿಗೆ ವಿಧಿಸಲು ನಿರ್ಧರಿಸಿದ್ದಾರೆ.
ಓವಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಕಾರು, ವಾಹನಗಳ ಮೇಲೆ 25% ಸುಂಕ ವಿಧಿಸಲಾಗುತ್ತದೆ. ಅಮೆರಿಕದಲ್ಲೇ ತಯಾರು ಮಾಡಿದ್ರೆ ಅದಕ್ಕೆ ಯಾವುದೇ ಸುಂಕ ವಿಧಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಏಪ್ರಿಲ್ 2ರಿಂದ ಸುಂಕ ನೀತಿ ಜಾರಿಯಾಗಲಿದ್ದು, ಏಪ್ರಿಲ್ 3ರಿಂದ ಸಂಗ್ರಹ ಪ್ರಾರಂಭವಾಗಲಿದೆ. ಅಮೆರಿಕದ ಈ ನೀತಿಯು ದೇಶಿಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಜೊತೆಗೆ ವಾಹನ ತಯಾರಕರ ಪೂರೈಕೆ ಸರಪಳಿ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಹೇಳಿದ್ದಾರೆ. ಆದ್ರೆ ಟ್ರಂಪ್ ಅವರ ಈ ನಿರ್ಧಾರದಿಂದ ಅಮೆರಿಕದ ಗ್ರಾಹಕರು ಹಣದುಬ್ಬರ ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಟ್ನಲ್ಲಿ ಹೀಗೆ ಡೊನಾಲ್ಡ್ ಟ್ರಂಪ್ ಮನಸ್ಸಿಗೆ ಬಂದ ರೀತಿ ತೆರಿಗೆ ಹಾಕಲು ಮುಂದಾಗಿದ್ದು, ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾರಿ ದೊಡ್ಡ ಕೋಲಾಹಲ ಸೃಷ್ಟಿಯಾಗುವ ಭಯ ಕಾಡ್ತಾ ಇದೆ. ಕೊರೊನಾ ಎಂಬ ಮಹಾಮಾರಿ ಅಪ್ಪಳಿಸಿದ ನಂತರ ಜಾಗತಿಕ ಆರ್ಥಿಕ ವ್ಯವಸ್ಥೆಯ ಬುಡವೇ ಅಲುಗಾಡಿ ಹೋಗಿದೆ. ಹೀಗಿದ್ದಾಗ ಹೆಚ್ಚಿನ ತೆರಿಗೆ ಹೇರಿಕೆ ಮಾಡಲು ಅಮೆರಿಕದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಆರ್ಥಿಕವಾಗಿ ಮತ್ತಷ್ಟು ಸಂಕಷ್ಟ ಎದುರಾಗಬಹುದು ಅಂತಾ ತಜ್ಞರು ಸಲಹೆ ಕೊಟ್ಟಿದ್ದಾರೆ.