ಬೆಂಗಳೂರು:- ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢವಾಗಿದೆ. ಈ ಮೂಲಕ ಕರ್ನಾಟಕ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಪುಣೆಯ ಎನ್‌ಐವಿ ಲ್ಯಾಬ್‌ನಲ್ಲಿ ಸೋಂಕು ದೃಢಪಟ್ಟಿದ್ದು, ಕಳೆದ 14 ವರ್ಷಗಳಿಂದ ದುಬೈನಲ್ಲಿ ವಾಸವಿದ್ದ ಸೋಂಕಿತ, ಇತ್ತೀಚೆಗೆ ಅಂದರೆ ಜನವರಿ 17ರಂದು ಮಂಗಳೂರಿಗೆ ಭೇಟಿ ನೀಡಿದ್ದರು.
40 ವರ್ಷದ ವ್ಯಕ್ತಿಯಲ್ಲಿ ಜ್ವರ, ಗುಳ್ಳೆ ಕಾಣಿಸಿಕೊಂಡಿತ್ತು. ತಕ್ಷಣ ಐಸೋಲೆಟ್ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವ್ಯಕ್ತಿಯ ಸ್ಯಾಂಪಲ್ನ್ನು ಬೆಂಗಳೂರು ಮೆಡಿಕಲ್ ಕಾಲೇಜು ಹಾಗೂ ಪುಣೆಯ ಎನ್‌ಐವಿ ಲ್ಯಾಬ್‌ಗೆ ರವಾನಿಸಲಾಗಿತ್ತು. ಇದೀಗ ಎನ್‌ಐವಿ ಲ್ಯಾಬ್ ರಿಪೋರ್ಟ್‌ನಲ್ಲಿ ಮಂಕಿಪಾಕ್ಸ್ ಸೋಂಕು ದೃಢ ಪಟ್ಟಿದೆ.
ಸೋಂಕಿತನ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಇನ್ನು ಏರ್‌ಪೋರ್ಟ್‌ನಲ್ಲಿ ಸೋಂಕಿತ ಪತಿಯನ್ನು ನೋಡಲು ಬಂದಿದ್ದ ಪತ್ನಿಯನ್ನು ಐಸೋಲೇಷನ್‌ನಲ್ಲಿರಲು ಸೂಚನೆ ನೀಡಲಾಗಿದೆ. ಯಾವುದೇ ಗುಣಲಕ್ಷಣಗಳು ಕಂಡರೆ ತಕ್ಷಣ ತಿಳಿಸಲು ಸೂಚಿಸಿದ್ದು, ಸಾರ್ವಜನಿಕರು ಮಂಕಿಪಾಕ್ಸ್ ಬಗ್ಗೆ ಭಯಪಡುವ ಅವಶ್ಯಕತೆಯಿಲ್ಲ ಎನ್ನಲಾಗಿದೆ.