ಬಿಗ್‌ಬಾಸ್ ಸೀಸನ್ 11 ರೋಚಕ ಘಟ್ಟವನ್ನ ತಲುಪಿದೆ. ಮನೆಯ ಸದಸ್ಯರು ಹೊಸ, ಹೊಸ ಟಾಸ್ಕ್‌ಗಳಲ್ಲಿ ಭರಪೂರ ಮನರಂಜನೆ ನೀಡುತ್ತಿದ್ದಾರೆ. ಈ ವಾರದ ಬಿಗ್ ಬಾಸ್ ಮನೆಯಿಂದ ನಟಿ ಶೋಭಾ ಶೆಟ್ಟಿ ಹೊರ ಬಂದಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಚೈತ್ರಾ ಕುಂದಾಪುರ ಮನೆಯಿಂದ ಹೊರ ಬಂದಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಇಂದು ದಿಢೀರನೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು ಕೋರ್ಟ್ಗೆ ಹಾಜರಾಗಿದ್ದಾರೆ. 1ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ಚೈತ್ರಾ ಕುಂದಾಪುರ ಹಾಜರಾಗಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿರುವ ಚೈತ್ರಾ ಕುಂದಾಪುರ ವಿರುದ್ಧ ಹಲವು ಕೇಸ್ಗಳು ದಾಖಲಾಗಿವೆ. ಆ ಪೈಕಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣ ಕೂಡ ಸೇರಿದೆ. ಈ ಪ್ರಕರಣ ಸದ್ಯ ಕೋರ್ಟ್ ಅಂಗಳದಲ್ಲಿ ಇದ್ದು ಇದೀಗ ಈ ಪ್ರಕರಣದಲ್ಲಿ ವಾರಂಟ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ನಿಂದ ಹೊರ ಬಂದು ಕೋರ್ಟ್ ಮೆಟ್ಟಿಲೇರಿದ್ದಾರೆ.
ಕುಂದಾಪುರದ ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚಿಸಿದ್ದ ಆರೋಪ ಚೈತ್ರಾ ಹಾಗೂ ಗ್ಯಾಂಗ್ ಮೇಲೆ ಇದೆ. ಟಿಕೆಟ್ ಕೊಡಿಸೋದಾಗಿ ಚೈತ್ರಾ ವಂಚನೆ ಮಾಡಿದ್ದರು. ಇದಕ್ಕಾಗಿ ಅವರು ಐದು ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಚೈತ್ರಾ, ಶ್ರೀಕಾಂತ್ ಸೇರಿ ಮೂವರು ಆರೋಪಿಗಳು ಕೋರ್ಟ್ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಚೈತ್ರಾ ಬಿಗ್‌ಬಾಸ್ ಮನೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ. ವಾರಂಟ್ ರೀಕಾಲ್ ಮಾಡಿಕೊಂಡು ಮತ್ತೆ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಅಲ್ಲಿ ಅವರು ಆಟ ಮುಂದುವರಿಸಲಿದ್ದಾರೆ. ಸದ್ಯ ಕೋರ್ಟ್ ಮುಂದಿನ ವರ್ಷ ಜನವರಿ 13ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲಿಯವರೆಗೆ ಬಿಗ್ ಬಾಸ್ ಮನೆಯಲ್ಲೇ ಚೈತ್ರಾ ಇದ್ದರೆ ಮತ್ತೊಮ್ಮೆ ಅವರು ವಿಚಾರಣೆಗೆ ಹಾಜರಾಗಬೇಕಾಗುತ್ತದೆ.