HomeEntertainmentರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರದೋಷ್ ಬಳಿಕ ರವಿಶಂಕರ್, ವಿನಯ್ ಕೂಡ ಮಾಫಿ ಸಾಕ್ಷಿಗೆ ಮನವಿ

ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರದೋಷ್ ಬಳಿಕ ರವಿಶಂಕರ್, ವಿನಯ್ ಕೂಡ ಮಾಫಿ ಸಾಕ್ಷಿಗೆ ಮನವಿ

For Dai;y Updates Join Our whatsapp Group

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿವೆ. ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಈ ಪ್ರಕರಣದಲ್ಲಿ ಎ14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಇದೀಗ ಎ8 ಆರೋಪಿ ರವಿಶಂಕರ್ ಹಾಗೂ ಎ10 ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಆಸಕ್ತಿ ತೋರಿಸಿದ್ದಾರೆ.

ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರದೋಷ್ ಅರ್ಜಿಯ ವಿಚಾರಣೆ ನಡೆಯುವ ವೇಳೆ, ರವಿಶಂಕರ್ ಹಾಗೂ ವಿನಯ್ ಪರ ವಕೀಲರು ತಮ್ಮ ಕಕ್ಷಿದಾರರನ್ನೂ ಮಾಫಿ ಸಾಕ್ಷಿಗಳಾಗಿ ಪರಿಗಣಿಸುವಂತೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಪ್ರತ್ಯೇಕ ಅರ್ಜಿ ಸಲ್ಲಿಸಲಾಗುವುದು ಎಂದು ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಇಬ್ಬರೂ ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ, ಪ್ರದೋಷ್ ಪರ ವಕೀಲ ದಿವಾಕರ್ ಈ ಬೆಳವಣಿಗೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರದೋಷ್ ಅವರ ಹೇಳಿಕೆಯನ್ನು ಮೊದಲು ನ್ಯಾಯಾಲಯ ದಾಖಲಿಸಿಕೊಳ್ಳಬೇಕು. ಉಳಿದ ಅರ್ಜಿಗಳನ್ನು ನಂತರ ಪರಿಗಣಿಸಬಹುದು ಎಂದು ಅವರು ವಾದಿಸಿದ್ದಾರೆ.

ನ್ಯಾಯಾಲಯ ಎರಡೂ ಕಡೆಗಳ ವಾದ ಆಲಿಸಿ ವಿಚಾರಣೆಯನ್ನು ಮುಂದೂಡಿದೆ. ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣದ ತನಿಖೆಗೆ ಮಹತ್ವದ ಮಾಹಿತಿ ಸಿಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಮತ್ತಿಬ್ಬರು ಆರೋಪಿಗಳು ಕೂಡ ಇದೇ ನಿರ್ಧಾರಕ್ಕೆ ಮುಂದಾಗಿರುವುದು ಪ್ರಕರಣದ ಪ್ರಮುಖ ಆರೋಪಿಗಳಿಗೆ ಕಾನೂನು ಸಂಕಷ್ಟ ಹೆಚ್ಚಿಸುವ ಸಾಧ್ಯತೆಯನ್ನು ಮೂಡಿಸಿದೆ.

ಈ ಹಿಂದೆ ಪ್ರದೋಷ್ ಪರ ವಕೀಲರು, ದರ್ಶನ್ ಇರುವ ಕೊಠಡಿಯಿಂದ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರುಪಡಿಸುವಂತೆ ಮನವಿ ಮಾಡಿದ್ದರು. ದರ್ಶನ್ ಪ್ರಭಾವ ಬೀರುವ ಅಥವಾ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ಈ ಮನವಿ ಸಲ್ಲಿಸಲಾಗಿತ್ತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img