ಬೆಂಗಳೂರು: ಬಹುಕಾಲದ ಬೇಡಿಕೆಯಾಗಿದ್ದ ಬೆಂಗಳೂರು–ತುಮಕೂರು ಮೆಟ್ರೋ ಯೋಜನೆಗೆ ಅಧಿಕೃತವಾಗಿ ಘೋಷಣೆ ದೊರೆತಿದ್ದು, ಇದೀಗ ಅಡಿಪಾಯ ಹಂತಕ್ಕೆ ಸಿದ್ಧತೆ ಆರಂಭವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮಹತ್ವಾಕಾಂಕ್ಷೆಯ ಈ ಅಂತರ್‌ಜಿಲ್ಲಾ ಕಾರಿಡಾರ್‌ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದೆ.
ಈ ಯೋಜನೆಗೆ ಡಿಪಿಆರ್ ಸಲಹಾ ಕಾರ್ಯವನ್ನು ಆರ್ವೀ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್‌ಗೆ ನೀಡಲಾಗಿದ್ದು, 59.60 ಕಿ.ಮೀ ಉದ್ದದ ಮೆಟ್ರೋ ಮಾರ್ಗಕ್ಕಾಗಿ 1.2 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಿಸಲಾಗಿದೆ. ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಟೆಂಡರ್‌ಗಳನ್ನು ನವೆಂಬರ್ 2025ರಲ್ಲಿ ಕರೆಯಲಾಗಿತ್ತು. ಯೋಜನೆಯ ಒಟ್ಟು ಅಂದಾಜು ವೆಚ್ಚ ಸುಮಾರು 20,649 ಕೋಟಿ ರೂ. ಆಗಿದೆ.
ಪ್ರಸ್ತುತ ಯೋಜನೆಗೆ ಸಂಬಂಧಿಸಿದಂತೆ ಸಂಚಾರ ಮತ್ತು ಪ್ರಯಾಣ ಮಾದರಿಗಳ ಅಧ್ಯಯನ, ದತ್ತಾಂಶ ಸಂಗ್ರಹಣೆ, ಪ್ರಾಥಮಿಕ ಜೋಡಣೆ ಪರಿಶೀಲನೆಗಳು, ವಿವಿಧ ಮೌಲ್ಯಮಾಪನಗಳು ಹಾಗೂ ಭೂತಾಂತ್ರಿಕ ತನಿಖೆಗಳು ನಡೆಯುತ್ತಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೆಟ್ರೋ ಮಾರ್ಗವು ನಮ್ಮ ಮೆಟ್ರೋದ 4ನೇ ಹಂತದ ವಿಸ್ತರಣೆಯ ಭಾಗವಾಗಿದ್ದು, ರಾಜ್ಯದ ಅತ್ಯಂತ ದುಬಾರಿ ಸಾರಿಗೆ ಯೋಜನೆಗಳಲ್ಲಿ ಒಂದಾಗಿದೆ.
ಬೆಂಗಳೂರು–ತುಮಕೂರು ಮೆಟ್ರೋ ಮಾರ್ಗವು ಬೆಂಗಳೂರಿನ ಮಾದವರದಿಂದ ಆರಂಭವಾಗಿ ತುಮಕೂರಿನ ನಾಗಣ್ಣನಪಾಳ್ಯವರೆಗೆ ಸಾಗಲಿದೆ. ಒಟ್ಟು 26 ನಿಲ್ದಾಣಗಳನ್ನು ಒಳಗೊಂಡಿರುವ ಈ ಕಾರಿಡಾರ್ ಪೂರ್ಣಗೊಂಡ ಬಳಿಕ, ಬೆಂಗಳೂರಿನ ವಾಯುವ್ಯ ಹೊರವಲಯ ಮತ್ತು ತುಮಕೂರು ನಡುವಿನ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಂಚಾರ ಸೌಲಭ್ಯ ಒದಗಿಸುವ ನಿರೀಕ್ಷೆಯಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಬಿಎಂಆರ್‌ಸಿಎಲ್ ಸಲ್ಲಿಸಿದ್ದ ಕಾರ್ಯಸಾಧ್ಯತಾ ವರದಿಯನ್ನು ರಾಜ್ಯ ಸರ್ಕಾರ ಅನುಮೋದಿಸಿದ್ದು, ಅದರ ನಂತರ ಡಿಪಿಆರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ಮುಂದಿನ ಹಂತದಲ್ಲಿ ವಿಸ್ತರಣೆಯ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು–ತುಮಕೂರು ಮೆಟ್ರೋ ಯೋಜನೆಯ ಪ್ರಮುಖ ನಿಲ್ದಾಣಗಳು
ಮಕಾಲಿ, ದಾಸನಪುರ, ನೆಲಮಂಗಲ, ನೆಲಮಂಗಲ ಟೋಲ್‌ಗೇಟ್, ಟಿ. ಬೇಗೂರ್, ತಿಪ್ಪಗೊಂಡನಹಳ್ಳಿ, ಸೋಂಪುರ ಕೈಗಾರಿಕಾ ಪ್ರದೇಶ, ಡಾಬ್ಸ್‌ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಕ್ಯಾತ್ಸಂದ್ರ, ತುಮಕೂರು ಬಸ್ ನಿಲ್ದಾಣ, ತುಡಾ ಲೇಔಟ್ ಮತ್ತು ನಾಗಣ್ಣನಪಾಳ್ಯ.



