ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದೆ. ರೈಲು, ವಿಮಾನ ಮತ್ತು ರಸ್ತೆ ಸಂಚಾರದ ಮೇಲೆ ಪರಿಣಾಮ ಬೀರಿದೆ. ಮಳೆಯಿಂದಾಗಿ ಕೆಲವು ಸಿನಿಮಾ, ಧಾರಾವಾಹಿ ಹಾಗೂ ಕೆಲ ರಿಯಾಲಿಟಿ ಶೋ ಮೇಲೂ ಪರಿಣಾಮ ಬೀರಿದೆ. ಅಂತೆಯೇ ಬಿಗ್ ಬಾಸ್ ಸೆಟ್ ಗೂ ಮಳೆಯಿಂದ ಸಮಸ್ಯೆ ಎದುರಾಗಿದೆ.
ಹಿಂದಿಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯನ್ನು ಮಾಧ್ಯಮಗಳಿಗೆ ತೋರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮನೆ ಹೇಗಿದೆ ಎಂಬುದನ್ನು ರಿವೀಲ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ನಗರದ ಹಲವು ಭಾಗಗಳಲ್ಲಿ ನೀರು ನಿಂತ ಕಾರಣ, ಜಿಯೋ ಹಾಟ್‌ಸ್ಟಾರ್ ತಂಡ ಇಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.
‘ನಗರದಲ್ಲಿ ಭಾರೀ ಮಳೆಯಿಂದಾಗಿ, ಹಲವೆಡೆ ನೀರು ಸಂಗ್ರಹವಾಗಿದೆ. ಆದ್ದರಿಂದ, ಬಿಗ್ ಬಾಸ್ ಮನೆಯ ಪ್ರವಾಸ ಮತ್ತು ಸಂಬಂಧಿತ ಎಲ್ಲಾ ಚಟುವಟಿಕೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ನಾವು ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ’ ಎಂದು ಹಾಟ್‌ಸ್ಟಾರ್ ತಂಡ ಮಾಹಿತಿ ನೀಡಿದೆ.
‘ಬಿಗ್ ಬಾಸ್ 19’ರ ಹೊಸ ಮನೆಗೆ ಸಣ್ಣಪುಟ್ಟ ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ. ಉಳಿದ ಯಾವುದೇ ಸಿನಿಮಾ ಶೂಟ್ ಮೇಲೆ ಈ ಮಳೆ ಪರಿಣಾಮ ಬೀರಿಲ್ಲ. ಬಹುತೇಕ ಎಲ್ಲಾ ಶೂಟಿಂಗ್‌ಗಳು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ನಡೆಯುತ್ತಿವೆ. ಫಿಲ್ಮ್ ಸಿಟಿಯ ಕೆಲವು ಸ್ಥಳಗಳಲ್ಲಿ ನೀರು ಸಂಗ್ರಹವಾಗಿದೆ. ಬಿಗ್ ಬಾಸ್ ಅಂದುಕೊಂಡ ದಿನಾಂಕದಂದೇ ಅಂದರೆ ‘ಬಿಗ್ ಬಾಸ್ 19′ ಆಗಸ್ಟ್ 24 ರಂದು ಆರಂಭ ಆಗಲಿದೆ ಎಂದು ಬಿಗ್ ಬಾಸ್ ತಂಡ ತಿಳಿಸಿದೆ.