ಬಿಗ್ ಬಾಸ್ ಸೀಸನ್ 11ರ ವಿಜೇತ ಹನುಮಂತ ತಮ್ಮ ಸ್ವಗ್ರಾಮ ಸವಣೂರು ತಾಲೂಕು ಚಿಲ್ಲೂರು ಬಡ್ನಿಯಲ್ಲಿರುವ ಮನೆಗೆ ಆಗಮಿಸಿದ್ದಾರೆ. ಈ ವೇಳೆ ನೂರಾರು ಮಂದಿ ಭಾಗಿಯಾಗಿದ್ದು ಹನುಮಂತನ ಗೆಲುವಿಗೆ ಜೈಘೋಷ ಹಾಕಿದ್ದಾರೆ. ತೆರೆದ ವಾಹದಲ್ಲಿ ಸುಮಾರು 10 ಕಿಮೀ ವರೆಗೆ ಮೆರವಣಿಗೆ ಮೂಲಕ ಹನುಮಂತನನ್ನು ಬರ ಮಾಡಿಕೊಂಡಿದ್ದು ಇದೇ ವೇಳೆ ಮಾತನಾಡಿದ ಹನುಮಂತ ಬಿಗ್ ಬಾಸ್ ಗೆದ್ದರು ತಾನು ಕುರಿ ಕಾಯುವ ಕೆಲಸ ಮುಂದುವರೆಸುತ್ತೇನೆ ಎಂದಿದ್ದಾರೆ.
‘ನಾನು ಕುರಿ ಕಾಯೋದನ್ನು ಮುಂದುವರಿಸುತ್ತೇನೆ. ಸದ್ಯ ನಮ್ಮ ಅಣ್ಣ ಇದ್ದಾರೆ. ನನಗೆ ಅದು ಇದು ಕಾರ್ಯಕ್ರಮವೇ ಆಗಿ ಬಿಡುತ್ತದೆ. ಸಮಯ ಸಿಕ್ಕಾಗ ನಾನು ಕುರಿ ಕಾಯುತ್ತೇನೆ’ ಎಂದು ಹನುಮಂತ ಅವರು ಹೇಳಿಕೊಂಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇಷ್ಟು ದೊಡ್ಡ ಹಂತಕ್ಕೆ ಬೆಳೆದ ಬಳಿಕವೂ ಹನುಮಂತ ತಮ್ಮ ಕಾಯಕ ಮರೆತಿಲ್ಲ ಎಂದು ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ.
ಹನುಮಂತ ಅವರು ಕುರಿ ಕಾಯುವ ಕಾಯಕ ಮಾಡಿಕೊಂಡು ಬಂದವರು. ಚಿಕ್ಕ ವಯಸ್ಸಿನಿಂದ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ಕುರಿ ಕಾಯುತ್ತಾ ಹಾಡು ಹೇಳುತ್ತಿದ್ದರು. ಆ ಬಳಿಕ ಜೀ ಕನ್ನಡ ಈ ಪ್ರತಿಭೆಯನ್ನು ಗುರುತಿಸಿ ‘ಸರಿಗಮಪ’ ಶೋನಲ್ಲಿ ಅವಕಾಶ ಕೊಟ್ಟಿತು. ಅಲ್ಲಿಂದ ಅವರ ಬದುಕು ಬದಲಾಯಿತು. ಈ ಶೋಗಳನ್ನು ಮಾಡಿ ಬಂದ ಹೊರತಾಗಿಯೂ ಊರಲ್ಲೇ ಇದ್ದು ಕುರಿ ಕಾಯುತ್ತಿದ್ದರು. ಇದೀಗ ಬಿಗ್ ಬಾಸ್ ವಿಜೇತರಾದ ಬಳಿಕವೂ ತಮ್ಮ ಕಾಯಕ ಮುಂದುವರೆಸೋದಾಗಿ ಹೇಳಿದ್ದಾರೆ.