ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳಾ ವೈದ್ಯೆಯೊಬ್ಬರ ಹಿಜಾಬ್‌ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಎಳೆದಿದ್ದು ಅತ್ಯಂತ ಖಂಡನೀಯ. ಈ ಕೃತ್ಯವು ಮಹಿಳೆಯರಿಗೆ ಮಾಡಿದ ಅವಮಾನವಾಗಿದ್ದು, ಸಿಎಂ ಬೇಷರತ್ತಾಗಿ ಕ್ಷಮೆ ಯಾಚಿಸಬೇಕೆಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ, ವಕೀಲರಾದ ದಾವಲಸಾಬ ತಾಳಿಕೋಟಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ನಂಬಿಕೆ, ಘನತೆ ಮತ್ತು ಸ್ವಾಭಿಮಾನವನ್ನು ಪ್ರತಿನಿಧಿಸುತ್ತದೆ. ಸಾರ್ವಜನಿಕವಾಗಿ ಮಹಿಳೆಯ ಮುಸುಕನ್ನು ತೆಗೆದುಹಾಕುವುದು, ಧಾರ್ಮಿಕ ಉಡುಪನ್ನು ಅವಮಾನಿಸುವುದು ಅವರ ನೈಜ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ.
ಈ ದೇಶದ ಸಂಸ್ಕೃತಿ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುವುದಾಗಿದೆ. ಆದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಎತ್ತಿಹಿಡಿಯುವಲ್ಲಿ ವಿಫಲರಾಗಿದ್ದು, ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.



