ಬೆಂಗಳೂರು:- ಬಿಹಾರ ಚುನಾವಣೋತ್ತರ ಸಮೀಕ್ಷೆಯಲ್ಲಿ NDAಗೆ ಬಹುಮತ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಾವು ಚುನಾವಣೋತ್ತರ ಸಮೀಕ್ಷೆಯನ್ನು ನಂಬುವುದಿಲ್ಲ. ಕರ್ನಾಟಕ ಚುನಾವಣೆ ವೇಳೆಯೂ ನಾನು ಈ ಸಮೀಕ್ಷೆಗಳನ್ನು ನಂಬಿರಲಿಲ್ಲ. ಯಾವ ಸಮೀಕ್ಷೆಗಳು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿರಲಿಲ್ಲ. ಈ ಸಮೀಕ್ಷೆಗಳು ನಮ್ಮ ಪರ ತೋರಿಸಿದರೂ ನಾನು ನಂಬುವುದಿಲ್ಲ. ತಟ್ಟೆಮರೆ ಏಟು ಯಾವ ರೀತಿ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ನಡೆದ ಉಪಚುನಾವಣೆ ವೇಳೆಯೂ ನಾನು ಮೂರಕ್ಕೆ ಮೂರು ಗೆಲ್ಲುತ್ತೇವೆ ಎಂದು ಹೇಳಿದ್ದೆ. ಫಲಿತಾಂಶ ಬರಲಿ ನೋಡೋಣ, ಇಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಿದೆ.
ಬಿಹಾರದ ಜನ ಬದಲಾವಣೆ ಬಯಸುತ್ತಿದ್ದು, ಹೀಗಾಗಿ ಮಹಾಘಟಬಂಧನ ಗೆಲ್ಲುವ ಭರವಸೆ ಇದೆ. ಜನ ನೀಡುವ ಆಶೀರ್ವಾದ ನಿರಂತರ ಪ್ರಕ್ರಿಯೆ. ಗೆಲುವು ಸೋಲು ಸಹಜ” ಎಂದು ತಿಳಿಸಿದರು. ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ ಎಂದು ಕೇಳಿದಾಗ, “ಬಿಹಾರ ಚುನಾವಣೆ ರಾಜ್ಯ ರಾಜಕಾರಣದ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ. ಕರ್ನಾಟಕ ಅಭಿವೃದ್ಧಿ, ಸಾಮಾಜಿಕ ಬದಲಾವಣೆ ನಾಯಕ” ಎಂದು ತಿಳಿಸಿದರು.



