ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಹಿಂದೂ ಸಮ್ಮೇಳನ ಮತ್ತು ಬೃಹತ್ ಶೋಭಾ ಯಾತ್ರೆಯ ಹಿನ್ನೆಲೆಯಲ್ಲಿ ರವಿವಾರ ಮುಂಜಾನೆ ಹಿಂದೂ ಸಂಘಟನೆಗಳ ನೂರಾರು ಯುವಕರು ಬೈಕ್‌ಗಳ ಮೂಲಕ ರ‍್ಯಾಲಿ ನಡೆಸಿ, ಸಮ್ಮೇಳನ ಯಶಸ್ವಿಗೆ ಎಲ್ಲರೂ ಭಾಗವಹಿಸುವಂತೆ ಸಂದೇಶ ನೀಡಿದರು.
ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಬೈಕ್‌ಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಶ್ರೀ ರಾಮ, ಹನುಮಾನ್, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತಸಿಂಗ್, ಇಮ್ಮಡಿ ಪುಲಿಕೇಶಿ, ಸಿಂಧೂರ ಲಕ್ಷ್ಮಣ, ಮಾದವ ಗೋಲ್ವಾಲ್ಕರ, ಕೇಶವ ಬಲಿರಾಂ ಹೆಡ್ಗೆವಾರ, ಅವರ ಭಾವಚಿತ್ರಗಳನ್ನು ಬೈಕ್ ಮೇಲೆ ಹಿಡಿದು ಘೋಷಣೆ ಮೊಳಗಿಸುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಸೋಮೇಶ್ವರ ತೇರಿನ ಮನೆ ಹತ್ತಿರ ಹಿಂದೂ ಸಮ್ಮೇಳನ ನಡೆಯುವ ವೇದಿಕೆ ಬಳಿ ಮುಕ್ತಾಯಗೊಳಿಸಿದರು.
ಬೈಕ್ ರ‍್ಯಾಲಿಗೆ ಯುವ ಮುಖಂಡರು, ಸಮ್ಮೇಳನದ ಪದಾಧಿಕಾರಿಗಳು ಚಾಲನೆ ನೀಡಿದರು. ಬೈಕ್ ರ‍್ಯಾಲಿ ಪಂಪ ವೃತ್ತದಿಂದ ಬಸ್ತಿಕೇರಿ, ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಮ್ಯಾಗೇರಿ ಓಣಿ, ಕೋರ್ಟ್ ಸರ್ಕಲ್, ತಹಸೀಲ್ದಾರ ಆಫೀಸ್, ದೂದ ನಾನಾ ದರ್ಗಾ, ಭರಮದೇವರ ಸರ್ಕಲ್, ಬಜಾರ ರಸ್ತೆ, ಪುರಸಭೆ, ಶಿಗ್ಲಿ ಕ್ರಾಸ್, ಹೊಸ ಬಸ್ ಸ್ಟಾಂಡ್, ಗದಗ ನಾಕಾ ಮುಖಾಂತರ ಸೋಮೇಶ್ವರ ತೇರಿನ ಮನೆಗೆ ಮುಕ್ತಾಯಗೊಂಡಿತು.



