ನಟ ಹಾಗೂ ನಿರ್ಮಾಪಕ ಸೊಹೈಲ್ ಖಾನ್ ಅವರು ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡಿದ ವಿಚಾರಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸೊಹೈಲ್ ಖಾನ್ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. “ದೊಡ್ಡವರಿಗೆ ಒಂದು ನ್ಯಾಯ, ಸಾಮಾನ್ಯರಿಗೆ ಮತ್ತೊಂದು ನ್ಯಾಯವೇ?” ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಸೆಲೆಬ್ರಿಟಿಯಾಗಿದ್ದರೂ ಸಂಚಾರ ನಿಯಮ ಎಲ್ಲರಿಗೂ ಒಂದೇ ಅಲ್ಲವೇ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.
ಈ ವಿವಾದದ ಬೆನ್ನಲ್ಲೇ ಸೊಹೈಲ್ ಖಾನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ಮುಂಬೈನ ಸಂಚಾರ ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆ ಕೇಳಿದ್ದಾರೆ. ಹೆಲ್ಮೆಟ್ ಧರಿಸಿದಾಗ ಕ್ಲಾಸ್ಟ್ರೋಫೋಬಿಯಾ ಸಮಸ್ಯೆ ಉಂಟಾಗುವುದರಿಂದ ಕೆಲವೊಮ್ಮೆ ಧರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಇದು ನೆಪವಲ್ಲ ಎಂದು ಒಪ್ಪಿಕೊಂಡಿರುವ ಅವರು, ಮುಂದಿನ ದಿನಗಳಲ್ಲಿ ನಿಯಮ ಪಾಲನೆಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಎಲ್ಲಾ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸೊಹೈಲ್ ಖಾನ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.



